ಗಣಿ ಗುತ್ತಿಗೆ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಹಟ್ಟಿ ಚಿನ್ನದಗಣಿಯಲ್ಲಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ ಸಫೀವುಲ್ಲಾಖಾನ್ ಅವರಿಗೆ ಮನವಿ ಸಲ್ಲಿಸಿತು. ಪ್ರಮುಖರಾದ ಬಾಬು ನಾಯಿಕೊಡಿ, ಕೆ.ಶಿವಾನಂದ, ಶಿವಪುತ್ರಪ್ಪ ಹಟ್ಟಿ, ಸುರೇಶಗೌಡ ಪೊಲೀಸ್ ಪಾಟೀಲ್, ಯಂಕಣ್ಣ ಯಾದವ್, ಅಂಬು ಸೇರಿದಂತೆ ರೈತರು ಇದ್ದರು. 
ರಾಯಚೂರು

ಪರಿಹಾರ ನೀಡಿ ಇಲ್ಲವೇ, ಜಮೀನು ಮರಳಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಆಗ್ರಹ
  • ಹಟ್ಟಿ ಚಿನ್ನದಗಣಿ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕಗೆ ಮನವಿ
ಹಟ್ಟಿ ಚಿನ್ನದಗಣಿ: ಹಟ್ಟಿ ಹಾಗೂ ಕೋಠಾ ಸೀಮೆಯ ವ್ಯಾಪ್ತಿಯ 1305 ಎಕರೆ ಗಣಿ ಗುತ್ತಿಗೆ ಪ್ರದೇಶಕ್ಕೆ ಸಂಬಂಧಿಸಿದಂತೆ 475 ಎಕರೆ ರೈತರ ಪಟ್ಟಾ ಜಮೀನಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿಯಿಂದ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ ಸಫೀವುಲ್ಲಾಖಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹಟ್ಟಿ ಹಾಗೂ ಕೋಠಾ ಸೀಮೆಯಲ್ಲಿನ 1305 ಎಕರೆ ಗಣಿಗುತ್ತಿಗೆ ಪ್ರದೇಶದಲ್ಲಿ 830 ಎಕರೆ ಭೂಮಿಯನ್ನು ಮಾತ್ರ ಅಧಿಕೃತವಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಬಾಕಿ 475 ಎಕರೆ ರೈತರ ಪಟ್ಟಾ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೆ, ಕಂಪನಿ ಹಾಗೂ ಸರ್ಕಾರಿ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಂದ್ರ ಕಚೇರಿ, ಬೆಂಗಳೂರಿನಿಂದ ಗಣಿ ಗುತ್ತಿಗೆ ಪಡೆದು ಇ.ಸಿ.ದಾಖಲೆಗಳಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಹೆಸರಿಗೆ ನೋಂದಾಯಿಸಲಾಗಿದೆ.
ಆದ್ದರಿಂದ ಉಳಿದ 475 ಎಕರೆ ಜಮೀನನ್ನು ಕಾನೂನುಬದ್ಧವಾಗಿ ಭೂಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ಕಲ್ಪಿಸಬೇಕು. ಇಲ್ಲವೇ ಇ.ಸಿ. ದಾಖಲೆಗಳಿಂದ ಹಟ್ಟಿ ಚಿನ್ನದಗಣಿ ಕಂಪನಿ ಹೆಸರು ತೆಗೆದು ರೈತರ ಜಮೀನಿನ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು. ಇಲ್ಲದಿದ್ದಲ್ಲಿ ಜು.27ರಂದು ಹಟ್ಟಿ ಚಿನ್ನದಗಣಿ ಕಂಪನಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.