ಜವಳಗೇರಾದಲ್ಲಿ ರೈತರು ಸಂಚಾರ ತಡೆದು ಪ್ರತಿಭಟನೆ ನಡೆಸಿದ ವೇಳೆ ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿದರು. 
ರಾಯಚೂರು

ಟೇಲೆಂಡ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಅಶೋಕ್ ಕುಮಾರ್ ಎನ್
ಸಿಂಧನೂರು: ತುಂಗಭದ್ರಾ ಎಡದಂಡೆ ಕಾಲುವೆ 54ನೇ ಡಿವಿಜನ್ ಕೊನೆಯ ಭಾಗದ ಕೃಷಿ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ರೈತರು ಜವಳಗೇರಾದಲ್ಲಿ ಸಂಚಾರ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ನೀರಿನ ಹಂಚಿಕೆಯಲ್ಲಿ ತಾರತಮ್ಯ ಮಾಡದೆ ನಾಲೆ ಕೊನೆಯ ಭಾಗದ (ಟೇಲೆಂಡ್) ಎಲ್ಲ ಕೃಷಿ ಜಮೀನಿಗೂ ಸಮರ್ಪಕವಾಗಿ ನೀರು ತಲುಪಿಸಬೇಕು. ಪದೇಪದೆ ಎದುರಾಗುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಬೆಳೆಗಳಿಗೆ ಅಗತ್ಯವಿರುವ ನೀರನ್ನು ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು.
ಕಾಲುವೆ ನೀರು ಹಂಚಿಕೆಯಲ್ಲಿ ನಾಲೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಕೊನೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದ ಪರಿಣಾಮ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳಿಂದ ನಾಲೆಗೆ ನೀರು ಹರಿಸುತ್ತಿದ್ದರೂ ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ಈಗಾಗಲೇ ಭತ್ತ ನಾಟಿಗೆ ಒಂದು ತಿಂಗಳು ವಿಳಂಬವಾಗಿದ್ದು, ಈಗಲೂ ನೀರು ಸಿಗದಿದ್ದರೆ ಹೇಗೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನೀರು ಸಿಗದಿದ್ದರೆ ನಮ್ಮ ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ ನಮ್ಮ ಪರಿಸ್ಥಿತಿ ಅರ್ಥೈಸಿಕೊಂಡು ನೀರು ಹರಿಸಲು ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದರು.
ಬಿಜೆಪಿ ಮುಖಂಡ ಕೆ.ಕರಿಯಪ್ಪ, ಕರ್ನಾಟಕ ರಾಜ್ಯ ರೈತಸಂಘದ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಪ್ರಮುಖರಾದ ಭೀಮಣ್ಣ ಸಂಗಟಿ, ಕರಟೂರಿ ವೆಂಕಣ್ಣ, ಶರಣಪ್ಪ ಮರಳಿ ಮತ್ತಿತರರಿದ್ದರು.