ರಾಯಚೂರು
ಬಡ ಕುಟುಂಬಗಳಿಗೆ ಮನೆ ನಿವೇಶನ ಹಾಗೂ ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂ. 16 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಸವಂತ್ರಾಯಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ನಡೆಸಿದ್ದು, ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರಗಳು ದೊರೆಯು ತ್ತಿಲ್ಲ, ಬೀಜ ಮತ್ತು ರಸ ಗೊಬ್ಬರವನ್ನು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ನೀಡಿದರೂ ಕೃಷಿ ಇಲಾಖೆ ಕ್ರಮ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಗ್ರಾಮೀಣ ಭಾಗದ ಬಂಡಿ ರಸ್ತೆ ಮತ್ತು ಸ್ಮಶಾನ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಸಾಕಷ್ಟು ಮನವಿ ಮಾಡಲಾಗಿದೆ ತಾಲೂಕಾಡಳಿತ, ಜಿಲ್ಲಾಡಳಿತ ಕ್ರಮ ವಹಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ, ಸಿಂಧನೂರು ತಾಲೂಕಿನ ಕೆಂಗಲ್, ಸಿರವಾರ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಸ್ಮಶಾನ ರಸ್ತೆ ಒತ್ತುವರಿಯಾಗಿದ್ದು ತೆರವುಗೊಳಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ರಸ ಗೊಬ್ಬರ ಅಭಾವ ಸೃಷ್ಟಿ ಮಾಡಿ, ಹೆಚ್ಚಿನ ಧರಕ್ಕೆ ಮಾರಾಟಕ್ಕೆ ಅಂಗಡಿಗಳ ಮಾಲೀಕರು ಮುಂದಾಗಿದ್ದಾರೆ, ಎಫ್‌ಐಡಿ ಮೂಲಕ ರಸಗೊ ಬ್ಬರ ಪೂರೈಸುತ್ತಿದ್ದು, ಯೂರಿಯಾ ರಸಗೊಬ್ಬರ ತಿಂಗಳಿಗೆ ಒಂದು ಚೀಲ ನೀಡುತ್ತಿದ್ದಾರೆ. ಇವರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೀರನಗೌಡ, ಪ್ರಮುಖರಾದ ಹನುಮಂತ, ದುರುಗೇಶ, ಕೆ.ಜಿ.ವೀರೇಶ ಇದ್ದರು.