ರಾಯಚೂರಿನ ಯಕ್ಲಾಸಪುರದ ಕಸ ವಿಲೇವಾರಿ ಹಾಗೂ ಘನತ್ಯಾಜ್ಯ ಪುನರ್ಬಳಕೆ ನಿರ್ವಹಣಾ ಘಟಕಕ್ಕೆ ಪಾಲಿಕೆಯ ಆಡಳಿತಾಧಿಕಾರಿ ಜಹೀರಾ ನಸೀಮ್ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಶರಣಪ್ಪ ಸತ್ಯಂಪೇಟೆ, ಸಂತೋಷಿ ರಾಣಿ ಇತರರಿದ್ದರು. 
ರಾಯಚೂರು

ಘನತಾಜ್ಯ ಸಂಪನ್ಮೂಲ ಮರುಬಳಕೆಗೆ ಆದ್ಯತೆ ನೀಡಿ

ನರೇಶ್ ಕುಮಾರ್
ರಾಯಚೂರು: ತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಸೂಚನೆ ನೀಡಿದರು. 
ನಗರದ ಯಕ್ಲಾಸಪುರದ ಕಸ ವಿಲೇವಾರಿ ಹಾಗೂ ಘನತ್ಯಾಜ್ಯ ಪುನರ್ಬಳಕೆ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಜೆಸಿಬಿ ಮತ್ತು ಇತರ ಯಂತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಘನತ್ಯಾಜ್ಯ ಸಂಪನ್ಮೂಲ ಪುನರ್ಬಳಕೆಗೆ ಆದ್ಯತೆ ಕೊಡಬೇಕು. 
ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸೂಚನೆಯಂತೆ ಕಸ ವಿಲೇವಾರಿ ಮಾಡಬೇಕು. ಸಾಕಷ್ಟು ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತಿದ್ದು ಅರ್ಧದಷ್ಟು ಘನತಾಜ್ಯ ಸಂಪನ್ಮೂಲ ಪುನರ್ಬಳಕೆಯಾಗಬೇಕು ಎಂದು ಸೂಚಿಸಿದರು. ಕೆಲವೇ ತಿಂಗಳಲ್ಲಿ ಇಲ್ಲಿನ ಘನತಾಜ್ಯವನ್ನು ಪುನರ್ಬಳಕೆ ಪ್ರಕ್ರಿಯೆಗೊಳಪಡಿಸಿ ಖಾಲಿ ಮಾಡುವುದಾಗಿ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಮಾಹಿತಿ ನೀಡಿದರು.
ಸ್ವಚ್ಛತೆಗಾಗಿ ಖರೀದಿಸಿದ ಸ್ವೀಪಿಂಗ್ ಯಂತ್ರ, ಒಳಚರಂಡಿ ಶುಚಿಗೊಳಿಸುವ ಮೌಂಟೇಡ್ ರೋಬಾಟಿಕ್ ಯಂತ್ರದ ಕಾರ್ಯವನ್ನು ಆಯುಕ್ತರು ವೀಕ್ಷಣೆ ನಡೆಸಿದರು. ನಂತರ ಮಾವಿನ ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಕೈಗೊಂಡ ಉದ್ಯಾನ, ಫುಟ್‌ಪಾತ್ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಶರಣಪ್ಪ ಸತ್ಯಂಪೇಟೆ, ಸಂತೋಷಿ ರಾಣಿ ಇತರರಿದ್ದರು.