ದೇವದುರ್ಗ ತಾಲೂಕು ಸಮುದ್ರ ಗ್ರಾಮದಲ್ಲಿ ಆರೋಗ್ಯ ಇಲಾಖೆ ನೌಕರರು ಜಾಗೃತಿ ಮೂಡಿಸಿದರು. ಆರೋಗ್ಯ ಸುರಕ್ಷಾಧಿಕಾರಿ ಡಾ.ರಶೀದಾ ಬೇಗಂ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ, ಆಶಾ ಕಾರ್ಯಕರ್ತೆ ಜ್ಯೋತಿ ಇತರರಿದ್ದರು. 
ರಾಯಚೂರು

ವೈಯಕ್ತಿಕ ಆರೋಗ್ಯಕ್ಕೆ ಆದ್ಯತೆ ನೀಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಸುರಕ್ಷಾಧಿಕಾರಿ ಡಾ.ರಶೀದಾ ಬೇಗಂ ಸಲಹೆ
  • ದೇವದುರ್ಗ ಮನೆಮನೆ ಭೇಟಿ ಅಭಿಯಾನ
ದೇವದುರ್ಗ: ಬೇಸಿಗೆಯಲ್ಲಿ ಉಷ್ಣ ಸಂಬಂಧಿತ ಕಾಯಿಲೆಗಳು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಡಾ.ರಶೀದಾ ಬೇಗಂ ಹೇಳಿದರು.
ತಾಲೂಕಿನ ಸಮುದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ಸುರಕ್ಷತೆಗಾಗಿ ಮನೆಮನೆ ಭೇಟಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇಸಿಗೆ ಸಂದರ್ಭದಲ್ಲಿ ಮಕ್ಕಳು, ವೃದ್ಧರು, ಗರ್ಭಿಣಿಯರು, ತಾಯಂದಿರು ಆರೋಗ್ಯದ ಕಡೆ ಗಮನಹರಿಸಬೇಕು. ಶುದ್ಧ ನೀರು ಕುಡಿಯುವುದರ ಜತೆಗೆ ಮಿತ ಆಹಾರ ಸೇವನೆ, ವಿಶ್ರಾಂತಿಗೆ ಆದ್ಯತೆ ನೀಡಬೇಕು.
ಮಜ್ಜಿಗೆ, ಗ್ಲೂಕೋಸ್, ಎಳನೀರು ಸೇವಿಸಬೇಕು. ಮದ್ಯಪಾನ, ಧೂಮಪಾನ, ಗುಟ್ಖಾ, ತಂಬಾಕು ಸೇವನೆಯಿಂದ ದೂರವಿರಬೇಕು. ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಅಥವಾ ಆರೋಗ್ಯ ಏರುಪೇರಾದರೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು. ವೈದ್ಯರು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ, ಆಶಾ ಕಾರ್ಯಕರ್ತೆ ಜ್ಯೋತಿ ಹಾಗೂ ಗ್ರಾಮಸ್ಥರು ಇದ್ದರು.