ರಾಯಚೂರು ತಾಪಂ ಸಭಾಂಗಣದಲ್ಲಿ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್‌ಸಮಿತಿ ಸಭೆ ನಡೆಯಿತು. ತಹಸೀಲ್ದಾರ್ ಸುರೇಶ ವರ್ಮಾ, ತಾಪಂ ಇಒ ಚಂದ್ರಶೇಖರ್ ಪವಾರ್, ಆಡಳಿತಾಧಿಕಾರಿ ವನಿತಾ ಹಾಗೂ ಪಿಡಿಒಗಳು ಇದ್ದರು. 
ರಾಯಚೂರು

ಕುಡಿವ ನೀರು-ಮೇವು ಬ್ಯಾಂಕ್‌ಗೆ ಆದ್ಯತೆ ನೀಡಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಟಾಸ್ಕ್‌ಫೋರ್ಸ್
  • ಸಮಿತಿ ಸಭೆ
  • ಕುಡಿವ ನೀರು

ರಾಯಚೂರು:

ಅಧಿಕಾರಿಗಳು ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿವ ನೀರು ಸಂಗ್ರಹ, ಮೇವು ಬ್ಯಾಂಕ್‌ಗೆ ಆದ್ಯತೆ ನೀಡಬೇಕು. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ರೈತರ ಬ್ಯಾಂಕ್ ಖಾತೆ, ಪಹಣಿ ಸೇರಿ ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ರಾಯಚೂರು ತಾಲೂಕಿಗೆ 50ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಕುಡಿವ ನೀರಿನ ವ್ಯವಸ್ಥೆಗೆ 1ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವುದು, ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಿದ ಸಂದರ್ಭದಲ್ಲಿ ಬಿಲ್‌ಗಳನ್ನು ಪಡೆದು ಹಣ ಪಾವತಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಗ್ರಾಮದ ರೈತರ ಜಮೀನುಗಳಿಗೆ ತೆರಳಿ ಬೆಳೆ ನಷ್ಟ್ಟದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ರಸ್ತೆ ಬದಿಯ ಜಮೀನುಗಳಿಗೆ ತೆರಳಿ ಮಾಹಿತಿ ಪಡೆಯದೆ, ಪ್ರತಿಯೊಬ್ಬ ರೈತರ ಜಮೀನಿಗೂ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು.
ಹತ್ತಿ, ತೊಗರಿ ಹಾಗೂ ಸಜ್ಜೆ ಬೆಳೆಗಳು 58ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ್ಟವಾಗಿದೆ. ರೈತರಿಗೆ ಪ್ರತಿಎಕರೆಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕೆಲಸ ಒದಗಿಸಬೇಕು. ರೈತರಿಗೆ ಅಗತ್ಯ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು. ವಸತಿ ರಹಿತರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 50ಸಾವಿರ ನಿವೇಶನಗಳ ಗುರಿ ನೀಡಲಾಗಿದೆ. ಈ ಕುರಿತು ಅಧಿಕಾರಿಗಳು ಅಗತ್ಯ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.