ಲಿಂಗಸುಗೂರಿನ ಐಎಂಎ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಭೆ ಯಲ್ಲಿ ಎಐಸಿಸಿ ಜಿಲ್ಲಾ ಉಸ್ತುವಾರಿ ತೋಟಾ ಲಕ್ಷ್ಮೀಕಾಂತ ರಾವ್ ಮಾತನಾಡಿದರು. ಪ್ರಮುಖ ರಾದ ಡಾ.ಮಕ್ಬೂಲ್ ಬಾಗವಾನ್, ಬಸವರಾಜ ಪಾಟೀಲ್ ಇಟಗಿ, ಜಾನ್ ವೆಸ್ಲಿ ಇದ್ದರು.
- ಎಐಸಿಸಿ ಉಸ್ತುವಾರಿ ತೋಟಾ ಲಕ್ಷ್ಮೀಕಾಂತ ರಾವ್ ಹೇಳಿಕೆ
- ಕಾಂಗ್ರೆಸ್ ಕಾರ್ಯಕರ್ತರ ಸಭೆ
ಲಿಂಗಸುಗೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ನಡೆಯಲಿದ್ದು, ಕಾರ್ಯ ಕರ್ತರ ಸಲಹೆಗಳನ್ನು ಪರಿಗಣನೆಗೆ ತೆಗೆದು ಕೊಳ್ಳಲಾಗುವುದು. ಒತ್ತಡ ಹಾಗೂ ಶಿಫಾರಸಿಗೆ ಅವಕಾಶ ಇರುವುದಿಲ್ಲ ಎಂದು ಎಐಸಿಸಿ ಜಿಲ್ಲಾ ಉಸ್ತುವಾರಿ, ತೆಲಂಗಾಣದ ಶಾಸಕ ತೋಟಾ ಲಕ್ಷ್ಮೀಕಾಂತ ರಾವ್ ಹೇಳಿದರು.
ಐಎಂಎ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಮಂಗಳವಾರ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ವರಿಷ್ಠರ ನಿರ್ಧಾರದಂತೆ ಸಂಘಟನಾ ಸೃಜನ್ ಅಭಿಯಾನದಡಿ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಸಲಾಗುತ್ತದೆ. ಬೂತ್‌ಮಟ್ಟದ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದೆ ಎಂದರು.
ಮಾಜಿ ಶಾಸಕರಾದ ಮಕ್ಬೂಲ್ ಬಾಗವಾನ್, ಜಾನ್ ವೆಸ್ಲಿ, ಬಸವರಾಜ ಪಾಟೀಲ್ ಇಟಗಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಪ್ರಮುಖರಾದ ಭೂಪನಗೌಡ ಪಾಟೀಲ್, ಗುಂಡಪ್ಪ ನಾಯಕ, ಬಸವರಾಜ ಗೌಡ ಗಣೇಕಲ್, ಶಶಿಧರಗೌಡ ಪಾಟೀಲ್, ಮಹಾಂತೇಶ ಪಾಟೀಲ್ ಮುದಗಲ್, ರಾಘವೇಂದ್ರ ಮುದಗಲ್, ಮೋಹನ ಗೋಸ್ಲೆ, ಗೋವಿಂದ ನಾಯಕ, ಅಮರೇಶ ಚಿಕ್ಕ ಹೆಸರೂರು, ಶಿವಶಂಕರಗೌಡ ಪಾಟೀಲ್, ವೆಂಕಟೇಶ ಗುತ್ತೇದಾರ, ಮಹ್ಮದ ರಫಿ, ಶಿವಣ್ಣ ನಾಯಕ ಕೋಠಾ, ಮಹಾದೇವಯ್ಯ ಗೌಡೂರು, ಸಂಜೀವಪ್ಪ ಚಲುವಾದಿ ಇತರರಿದ್ದರು.
ಎರಡು ಬಣಗಳಿಂದ ಅಭಿಪ್ರಾಯ ಮಂಡನೆ: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿರುವುದು ಎಐಸಿಸಿ ವೀಕ್ಷಕರ ಸಭೆಯಲ್ಲಿ ಸಾಬೀತಾಯಿತು. ಬಯ್ಯಪುರ ಬಣ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಣದವರು ತಮ್ಮ ಅಭಿಪ್ರಾಯ ಮಂಡಿಸಿದರು. ಬಯ್ಯಪುರ ಬಣದಿಂದ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಂ.ಈರಣ್ಣ ಮಾನ್ವಿ, ರಾಜಶೇಖರ, ಲಿಂಗರಾಜ ಹಂಚಿನಾಳ, ಅಬ್ದುಲ್ ಕರೀಂ, ಅಸ್ಲಂ ಪಾಷಾ ಇವರಲ್ಲಿ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ತಿಳಿಸಿರುವುದಾಗಿ ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್ ಹೇಳಿದರು. ಇನ್ನು ಡಿ.ಎಸ್.ಹೂಲಗೇರಿ ಬಣದಿಂದ ಕೆ.ಶಾಂತಪ್ಪ, ಮಲ್ಲಿಕಾರ್ಜುನ ಯದ್ದಲದಿನ್ನಿ, ಸೋಮನಗೌಡ ಬಾದರ್ಲಿ, ಚಂದ್ರಶೇಖರ ಕುರ್ಡಿ, ಮಹ್ಮದ್ ಶಾಲಂ ಇವರಲ್ಲಿ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ತಿಳಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಗೋವಿಂದ ನಾಯಕ ಹೇಳಿದರು. ಎರಡೂ ಬಣಗಳಿಂದ ಎಐಸಿಸಿ ವೀಕ್ಷಕರಿಗೆ ಅಭಿಪ್ರಾಯ ತಿಳಿಸಲಾಯಿತು.