ಮುದಗಲ್ ಸಮೀಪದ ದೇಸಾಯಿ ಬೋಗಾಪೂರ ತಾಂಡಾದಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತಕದ ಮುಂದೆ ನಿಂತು ಸಮರ್ಪಕವಾಗಿ ವಿದ್ಯುತ್ ಪೂರೈಸಲು ನಿವಾಸಿಗಳು ಅಗ್ರಹಿಸಿದರು. ಶಂಕ್ರಪ್ಪ , ತುಳಜಾಬಾಯಿ, ಮಾನ್‌ಸಿಂಗ್ ಇತರರಿದ್ದರು. 
ರಾಯಚೂರು

ವಿದ್ಯುತ್ ಕಡಿತ ನೀರಿಗೆ ಹೊಡೆತ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕವಾಗಿ ದೊರಕದ ಜೀವಜಲ
  • ತಲೇಖಾನ್ ಗ್ರಾಪಂ ಜನಜೀವನಕ್ಕೆ ತೊಂದರೆ
ಮುದಗಲ್: ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪದೇಪದೆ ವಿದ್ಯುತ್ ಕಡಿತದಿಂದ ಜನಜೀವನಕ್ಕೆ ತೊಂದರೆಯಾಗಿದೆ.
ದೇಸಾಯಿ ಬೋಗಾಪುರ, ಮತ್ತು ಗೌಡರ ಹಟ್ಟಿ ಕಸ್ತೂರಿ ತಾಂಡಾ, ಪಾಪಣ್ಣ ತಾಂಡಾ, ದಾದೂಡಿ ತಾಂಡಾ, ಕಿರಣ ತಾಂಡಾ, ಹಡಗಲಿ, ಹಡಗಲಿ ವೇಣ್ಯಪ್ಪ ತಾಂಡಾಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತವಾಗುವುದರಿಂದ ರಾತ್ರಿ ಬೆಳಕು, ಗಾಳಿಯ ಸಮಸ್ಯೆ ಜತೆಗೆ ಕುಡಿಯುವ ನೀರಿನ ಕೊರತೆಯೂ ಎದುರಾಗಿದೆ. ಪರಿಣಾಮ ನಳಗಳ ಮುಂದೆ ಜನರು ಬಿಂದಿಗೆಗಳನ್ನು ಹಿಡಿದು ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮಗಳಿಗೆ ಸರಬರಾಜಾಗುವ ವಿದ್ಯುತ್ ಉಸ್ತುವಾರಿಯು ಮಸ್ಕಿ ಕ್ಷೇತ್ರದ ಮೆದಿಕಿನಾಳ ಸೆಕ್ಷನ್‌ಗೆ ಒಳಪಟ್ಟಿದ್ದು, ವಿದ್ಯುತ್ ಮಾತ್ರ ಲಿಂಗಸುಗೂರು ಕ್ಷೇತ್ರದ ನಾಗಲಾಪುರ 33ಕೆ.ವಿ.ಸ್ಟೇಷನ್‌ನಿಂದ ಸರಬರಾಜಾಗುತ್ತಿದೆ. ವಿದ್ಯುತ್ ನಿರ್ವಹಣೆ ಮಸ್ಕಿ ತಾಲೂಕು, ಸರಬರಾಜು ಲಿಂಸುಗೂರು ತಾಲೂಕು ವ್ಯಾಪ್ತಿಗಿರುವುದರಿಂದ ಸಿಬ್ಬಂದಿ ಸಮನ್ವಯ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೆ, ಸದ್ಯ ಪೂರ್ವ ಮುಂಗಾರು ಇದ್ದು, ಗಾಳಿ-ಮಳೆಗೆ ಟ್ರಾನ್ಸ್‌ಫಾರ್ಮರ್ ಕೆಡುವುದು, ಅಲ್ಲಲ್ಲಿ ಕಂಬಗಳು ಉರುಳುವುದು, ತಂತಿಗಳು ತುಂಡಾಗುವ ಸಮಸ್ಯೆಯಿಂದ ವಿದ್ಯುತ್ ವ್ಯತ್ಯಯ ಮತ್ತಷ್ಟು ಉಲ್ಬಣಿಸಿದ್ದು, ಮಕ್ಕಳಿಂದ ಹಿಡಿದು ವೃದ್ಧರಿಗೂ ತೊಂದರೆ ಉಂಟಾಗುತ್ತಿದೆ.
ಬಾಣಂತಿಯರು, ಗರ್ಭಿಣಿಯರು, ಮಕ್ಕಳು, ಮಹಿಳೆಯರು, ವೃದ್ಧರು ರಾತ್ರಿ ಕಳೆಯುವುದೇ ಸವಾಲಾಗಿದೆ. ಹೊರಗಡೆ ಇದ್ದರೆ ಗಾಳಿ-ಮಳೆ ಕಾಟ, ಇನ್ನು ಒಳಗಡೆ ಇದ್ದರೆ ಸೆಕೆ ಕಾಟ. ಇದರಿಂದ ಜನ ಹೈರಾಣಾಗಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ತಾಲೂಕಿನ ಜೆಸ್ಕಾಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
"

ಮಳೆಗಾಲ ಆರಂಭವಾಗುತ್ತಿದೆ. ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗುತ್ತಿದೆ. ವಿದ್ಯುತ್ ಪರಿವರ್ತಕ ಕೆಟ್ಟು, ವಿದ್ಯುತ್ ತಂತಿಗಳು ತುಂಡರಿಸಿದರೂ ಗ್ರಾಮಸ್ಥರ ಸಮಸ್ಯೆಗೆ ಜೆಸ್ಕಾಂ ತಲೆಕೆಡೆಸಿಕೊಂಡಿಲ್ಲ. ಕೂಡಲೇ ಸಂಬಂಧಿಸಿದವರು ಸಮಸ್ಯೆ ಬಗೆಹರಿಸಿ. — ಮಾನ್‌ಸಿಂಗ್ ಹಡಗಲಿ ನಿವಾಸಿ