ಏಳನೇ ವಾರ್ಡ್‌ನಲ್ಲಿ ರಸ್ತೆ ಮಧ್ಯೆ 12 ಅಡಿ ಆಳದ ಗುಂಡಿ ತೋಡಿರುವುದು. 
ರಾಯಚೂರು

ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

ನರೇಶ್ ಕುಮಾರ್
ಲಿಂಗಸುಗೂರು: ಪಟ್ಟಣದ ಹೃದಯ ಭಾಗದಲ್ಲಿರುವ ರಾಜ ಕಾಲುವೆಗೆ ಹೊಂದಿಕೊಂಡ 7ನೇ ವಾಡ್‌ನಲ್ಲಿ ಜನರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ವಾರ್ಡ್‌ನಲ್ಲಿ ಜನರು ಓಡಾಡಲು, ವಾಹನ ಸಂಚಾರಕ್ಕೆ ನಿರ್ಮಿಸಿರುವ ರಸ್ತೆ ಹದಗೆಟ್ಟಿದೆ. ರಸ್ತೆ ಮಧ್ಯದಲ್ಲಿ 10 ಅಡಿ ಆಳದ ಗುಂಡಿ ತೋಡಿ ಬಿಡಲಾಗಿದೆ. ಮಳೆ, ಕೊಳಚೆ ನೀರು ತುಂಬಿದ್ದರಿಂದ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ. ಮುಂದಾಗಬಹುದಾದ ಅವಘಡ ತಪ್ಪಿಸಲು ಪುರಸಭೆ ಅಧಿಕಾರಿಗಳು ಮುಂದಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.
ರಸ್ತೆ ಅಕ್ಕಪಕ್ಕ ಮಣ್ಣು ಅಗೆದು ಚರಂಡಿ ತೋಡಲಾಗಿದೆ. ಸುಸಜ್ಜಿತ ಸಿಸಿ ಚರಂಡಿಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಮಳೆ ಬಂದರೆ ಚರಂಡಿಗಳು ಮುಚ್ಚಿ ಕೊಳಚೆ ನೀರು ಮನೆಗಳಿಗೆ ನುಗ್ಗಿದ ಪ್ರಸಂಗವೂ ನಡೆದಿವೆ. ಅಲ್ಲದೆ ಬೆಳಕಿನ ಕೊರತೆ ಎದುರಾಗಿದೆ. ಸಮರ್ಪಕ ಬೀದಿ ದೀಪಗಳಿಲ್ಲದೆ ಕತ್ತಲಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. 
ಕುಡಿಯುವ ನೀರಿಲ್ಲ: ಕಳೆದೊಂದು ತಿಂಗಳಿಂದ ಸಮರ್ಪಕ ಕುಡಿವ ನೀರು ಪೂರೈಕೆಯಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿವ ನೀರು ಪೂರೈಕೆ ಪೈಪ್ ಒಡೆದಿದ್ದು ದುರಸ್ತಿ ಮಾಡಿಲ್ಲ. ಹೀಗಾಗಿ ತಗ್ಗು ಗುಂಡಿಗಳಲ್ಲಿ ನಿಂತಿರುವ ಕೊಳಚೆ ನೀರು ಒಡೆದ ಪೈಪ್‌ನಲ್ಲಿ ಹರಿಯುತ್ತಿದ್ದರಿಂದ ಜನರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. 7ನೇ ವಾರ್ಡ್‌ನಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಪಡಿಸಲು ಮುಂದಾಗದಿರುವುದು ದುರಂತ. 
"

ಪುರಸಭೆಯಿಂದ ಗುಂಡಿಗಳು ತೋಡಿಲ್ಲ. ಶುಕ್ರವಾರ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.

| ಗಿರಿಜಾ, ಪರಿಸರ ಇಂಜಿನಿಯರ್, ಪುರಸಭೆ ಲಿಂಗಸುಗೂರು