ಲಿಂಗಸುಗೂರು: ವಿಧಾನ ಪರಿಷತ್ ಚುನಾವಣೆ ವೇಳೆ ಕೆಲ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ನಾನು ಅಡ್ಡ ಮತದಾನ ಮಾಡಿಲ್ಲ. ಹಾಗೇನಾದರೂ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಸಗುಡಿಸುತ್ತ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ನಿಷ್ಠಾವಂತ ಬಿಜೆಪಿ ಶಾಸಕನಾಗಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೇಳಿದಾಗ ಬಿಜೆಪಿ ಶಾಸಕರಿಗೆ ಅನುದಾನ ಕೊಡುವುದಿಲ್ಲ ಎಂದಿದ್ದರು. ಸುಮಾರು 40 ವರ್ಷಗಳಿಂದ ಗುತ್ತಿಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಕಾಂಗ್ರೆಸ್ ಸರ್ಕಾರ ಬಂದಮೇಲೆ 3 ವರ್ಷಗಳಿಂದ ನಮ್ಮ ಕಂಪನಿ ಬಂದ್ ಮಾಡಿದ್ದೇವೆ. ಇಂಥವರಿಗೆ ಮತನೀಡಬೇಕಾ? 700 ರಿಂದ 750 ಕೋಟಿ ರೂ. ಬಿಲ್ ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ. 172 ಕೋಟಿ ರೂ. ನಮ್ಮ ಕಂಪನಿಯಿಂದ ಹಣ ರಿಕವರಿ ಮಾಡಿದೆ.
ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಗೆ ಯಾವ ಮುಖ ಇಟ್ಟುಕೊಂಡು ಮತ ನೀಡಬೇಕು ಎಂದು ಕಾಂಗ್ರೆಸ್‌ನವರೇ ಹೇಳಬೇಕು. ನನಗೆ ಬಿಜೆಪಿ ಸೂಕ್ತ ಸ್ಥಾನಮಾನ ಕೊಟ್ಟಿದೆ. ಪಕ್ಷವನ್ನು ಗೌರವದಿಂದ ತಾಯಿ ಸಮಾನವಾಗಿ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್ ಯಾವತ್ತೂ ವೈರಿ ಪಕ್ಷವೇ ಆಗಿರುತ್ತದೆ. ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಜ್ಜಲ್ ತಿಳಿಸಿದರು.