ದೇವದುರ್ಗದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸೋಮವಾರ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆ ನಡೆಯಿತು.
- ಅಧಿಕಾರಿಗಳಿಗೆ ತಹಸೀಲ್ದಾರ್ ನಾಗಮ್ಮ ಸೂಚನೆ
- ದೇವದುರ್ಗದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ
ದೇವದುರ್ಗ: ಮಕ್ಕಳಲ್ಲಿ ಕಂಡುಬರುವ ಪೋಲಿಯೋ ರೋಗ ನಿರ್ಮೂಲನೆಗೆ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಂಡಿದ್ದು, ಆರೋಗ್ಯ ಇಲಾಖೆ ಶೇ.100 ಪ್ರಗತಿ ಸಾಧಿಸಲು ಶ್ರಮಿಸಬೇಕು ಎಂದು ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಸೂಚಿಸಿದರು.
ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಅಂಗವಾಗಿ ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
ಡಿ.21ರಿಂದ 24ರವರೆಗೆ ತಾಲೂಕಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಆರೋಗ್ಯ ಇಲಾಖೆಗೆ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡಿ ಯಾವುದೇ ಮಗು ಪೋಲಿಯೋ ಹನಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು. ಆರೋಗ್ಯ ಇಲಾಖೆ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿ, ಪೋಲಿಯೋ ಲಸಿಕೆ ಸಂರಕ್ಷಣೆ ಹಾಗೂ ಅಭಿಯಾನ ಸುಗಮವಾಗಿ ಸಾಗಲು ಜೆಸ್ಕಾಂ ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ನಿರಂತರ ವಿದ್ಯುತ್ ನೀಡಬೇಕು. ಈ ವರ್ಷ ಬಸ್ ನಿಲ್ದಾಣದಲ್ಲಿ ಶಿಬಿರ ಆಯೋಜಿಸಿ ಪ್ರತಿಬಸ್ ಒಳಗೆ 5 ವರ್ಷದೊಳಗಿನ ಮಕ್ಕಳು ಕಂಡುಬಂದರೆ ತಪ್ಪದೆ ಲಸಿಕೆ ಹಾಕಲಾಗುವುದು. ಶಿಕ್ಷಣ ಇಲಾಖೆ ಅಧಿಕಾರಿಗಳು ತಾಲೂಕಿನ ಎಲ್ಲ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಅಭಿಯಾನ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ತಾಪಂ ಇಒ ಬಸವರಾಜ ಹಟ್ಟಿ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಗಂಗಮ್ಮ, ಕೊಪ್ರೇಶ ಇತರರಿದ್ದರು.