ಲಿಂಗಸುಗೂರಿನ ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ವೀ.ವಿ. ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿದರು. ಪ್ರಮುಖರಾದ ಡಾ.ಎನ್.ಎಲ್.ನಡುವಿನಮನಿ, ಪಾಮಯ್ಯ ಮುರಾರಿ, ಡಾ.ಡಿ.ಎಚ್. ಕಡದಳ್ಳಿ, ಚಂದ್ರಶೇಖರರೆಡ್ಡಿ, ಸಿ.ಬಿ.ಚಿಲ್ಕರಾಗಿ ಇತರರಿದ್ದರು.
ಲಿಂಗಸುಗೂರು: ಜನ-ಮಾನಸವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದತ್ತ ಸೆಳೆಯುವ ಕಾರ್ಯ ಮಾಡಲಾಗುತ್ತಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಹೇಳಿದರು.
ಪಟ್ಟಣದ ಶ್ರೀ ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ನಾವು ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಗುರು ಕಾರುಣ್ಯ ಭಾವೈಕ್ಯ ಬದುಕಿಗೆ ತತ್ವಪದ ಮಹಾಯಾನ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಶ್ರೀ ಬಸವೇಶ್ವರ ಕಾಲೇಜ್ ಆವರಣದಲ್ಲಿ ಮಹಾಯಾನ ಡಿ.26 ರಿಂದ ಜ.1 ರವರೆಗೆ ನಿತ್ಯ ಸಂಜೆ 6ಕ್ಕೆ ನಡೆಯಲಿದೆ. ತತ್ವಪದಕಾರರಾದ ಸಂತ ಶಿಶುನಾಳ ಶರೀಫ, ಹನ್ನೇನಹಳ್ಳಿ ದಾಸಗಿರಿಯಪ್ಪ, ವಡಿಕೆಪ್ಪ ತಾತ, ಮಂಚೇಸ್ವಾಮಿ, ಹೇರೂರು ವಿರುಪನಗೌಡ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಅವರ ತತ್ವಪದ ವಾಚನ, ಗಾಯನ ಮತ್ತು ವ್ಯಾಖ್ಯಾನ ಪ್ರಸ್ತುತಪಡಿಸಲಾಗುವುದು ಎಂದರು.