ಇಂದನ ಬೆಲೆ ಹೆಚ್ಚಳವಾಗಿರುವುದರಿಂದ ತಾಲೂಕಿನ ಸಿದ್ರಾಮಪುರ ಗ್ರಾಮದಲ್ಲಿ ರೈತ ಎತ್ತುಗಳಿಂದ ಜಮೀನ ಕೆಲಸ ಮಾಡುತ್ತಿರುವುದು.
- ಹೆಚ್ಚಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ
ರಾಯಚೂರು
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ತಲಾ 3 ರೂ ಹೆಚ್ಚಳ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಳವಾಗಿದ್ದು, ಇದರಿಂದ ರೈತರಿಗೆ ಜೇಬಿಗೆ ಕತ್ತರಿ ಬಿದ್ದಿದ್ದು, ಇಂಧನ ದರ ಹೆಚ್ಚಳದ ಬಿಸಿ ನೇರವಾಗಿ ಅನ್ನದಾತನಿಗೆ ತಗುಲಿದೆ.
ಸದ್ಯ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಭರದ ಸಿದ್ಧತೆಯಲ್ಲಿ ತೊಡಗಿರುವ ರೈತರಿಗೆ ಪೆಟ್ರೋಲ್, ಡೀಸೆಲ್ ದರ ಬರಸಿಡಿಲಿನಂತೆ ಬಡಿದಿದೆ. ಕೃಷಿ ಜಮೀನುಗಳನ್ನು ಮುಂಗಾರು ಹಂಗಾಮಿಗೆ ಬಿತ್ತನೆ ಚಟುವಟಿಕೆಗಳಿಗೆ ಸಿದ್ಧತೆಯಲ್ಲಿ ತೊಡಗಿದ ರೈತರು ಭೂಮಿ ಹದಮಾಡಿಡಲು ಟ್ರಾಕ್ಟರ್ ಅವಲಂಬಿಸಿದ್ದಾರೆ. ದೊಡ್ಡ ರೈತರಿಂದ ಹಿಡಿದು ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಭೂಮಿ ಉಳುಮೆ ಮತ್ತು ಹದ ಮಾಡಲು ಟ್ರಾಕ್ಟರ್ ನೆಚ್ಚಿಕೊಂಡಿದ್ದಾರೆ.
ಅದಲ್ಲದೆ ಟ್ರಾಕ್ಟರ್ ನಂತಹ ಯಂತ್ರೋಪಕರಣಗಳನ್ನು ಹೊಂದಿಲ್ಲದೆ ಜಿಲ್ಲೆಯ ಅಸಂಖ್ಯಾತ ರೈತರು ಟ್ರಾಕ್ಟರ್ ನಿಂದ ಒಂದು ತಾಸಿಗೆ 800 ರಿಂದ 900ರೂ ಬಾಡಿಗೆ ಹಣ ಕೊಟ್ಟು ಕೃಷಿ ಚಟುವಟಿಕೆ ನಡೆಸುವ ಪರಿಸ್ಥಿತಿಯಿದೆ. ಜೊತೆಗೆ ಕಾಲುವೆಯ ಹೂಳು ತೆರವುಗೊಳಿಸಲು, ಬೇಲಿ ಕಿತ್ತುಹಾಕಲು, ಬದು ನಿರ್ಮಿಸಲು ಸೇರಿದಂತೆ ಅನೇಕ ಕೃಷಿ ಕೆಲಸಗಳಿಗೆ ಜೆಸಿಬಿ ಸಹಕಾರಿಯಾಗಿದೆ.
ಸದ್ಯ ಜೆಸಿಬಿ ಒಂದು ತಾಸಿಗೆ 1200 ರೂ ದರ ನಿಗದಿಪಡಿಸಲಾಗಿದೆ. ಈ ಹಿಂದೆ 800ರಿಂದ 1000 ರೂ ಇದ್ದ ದರ ಪೆಟ್ರೋಲ್, ಡೀಸೆಲ್ ದರ 3 ರೂ ಗೆ ಜಿಗಿಯುತ್ತಿದ್ದಂತೆ ಅದರ ಹೊರೆಯನ್ನು ಜೆಸಿಬಿ, ಟ್ರಾಕ್ಟರ್ ಮಾಲೀಕರು ಹೊರಲಾಗದೆ ಅನಿವಾರ್ಯವಾಗಿ ರೈತರ ಮೇಲೆ ಹಾಕುತ್ತಿರುವುದು ಕಂಡು ಬಂದಿದೆ.
ಆರ್ಥಿಕ ಮುಗ್ಗಟ್ಟು ಅನುಭವಿಸುವ ಸಣ್ಣ ಪುಟ್ಟ ರೈತರಿಗೆ ಇಂಧನ ದರ ಕೃಷಿ ಬದುಕಿಗೆ ಕೊಳ್ಳಿ ಇಟ್ಟಿದೆ. ಸದ್ಯ ರಾಯಚೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 107 ರೂಗೆ ಜಿಗಿದಿದೆ. ಡೀಸೆಲ್ ದರ 94ರೂ ಆಸುಪಾಸಿನಲ್ಲಿದೆ. ಈಗಾಗಲೆ ಕೃಷಿ ಕ್ಷೇತ್ರದಲ್ಲಿ ಅಧಿಕ ವೆಚ್ಚವಾಗುತ್ತಿರುವುದರಿಂದ ನೊಂದಿರುವ ರೈತರಿಗೆ ಇಂಧನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂಧನ ದರ ಹೆಚ್ಚಳ ಬೆನ್ನಲ್ಲೇ ಟ್ರಾಕ್ಟರ್ ಬಾಡಿಗೆ ಮತ್ತು ಜೆಸಿಬಿ ಬಾಡಿಗೆ ದರಗಳು ಹೆಚ್ಚಾಗಿವೆ. ಇದರ ಜತೆಗೆ ಕೃಷಿ ಸಾಮಗ್ರಿಗಳು, ಕೃಷಿ ಪರಿಕರಗಳ ದರವೂ ಹೆಚ್ಚಾಗುವ ಸಾಧ್ಯತೆಯಿದೆ. ಕೃಷಿ ಪರಿಕರಗಳ ಸಾಗಣೆಯ ವೆಚ್ಚವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಅದಲ್ಲದೇ ಕೃಷಿ ಕೂಲಿಕಾರ್ಮಿಕರನ್ನು ಸಾಗಿಸಲು ಮತ್ತು ಉತ್ಪನ್ನಗಳನ್ನು ಹೊಲದಿಂದ ಮನೆಗೆ ಮತ್ತು ಮನೆಯಿಂದ ಮಾರುಕಟ್ಟೆಗೆ ಸಾಗಿಸುವ ಆಟೋ ವಾಹನಗಳ ದರವೂ ಹೆಚ್ಚಳ ಭೀತಿಯಿದೆ.
ಕೃಷಿ ಯಂತ್ರೋಪಕರಣಗಳಾದ ಕಟಾವು ಯಂತ್ರ, ಹುಲ್ಲು ಸುತ್ತುವ ಯಂತ್ರ, ಟ್ರಾಕ್ಟರ್, ಜೆಸಿಬಿ, ಆಟೋಗಳ ಸೇವಾ ಶುಲ್ಕ ಹೆಚ್ಚಳ ಸಾಧ್ಯತೆಯಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.