ಮಾನ್ವಿಯಲ್ಲಿ ಹಮ್ಮಿಕೊಂಡಿದ್ದ ಬಿಎಲ್‌ಒ ಹಾಗೂ ಬಿಎಲ್‌ಎಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಎಸ್. ಪೂವಿತಾ ಮಾತನಾಡಿದರು. ಎಸಿ ಹಂಪಣ್ಣ ಸಜ್ಜನ್, ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಸಿರವಾರ ತಹಸೀಲ್ದಾರ್ ಅಶೋಕ ಪವಾರ್ ಇದ್ದರು.
ಮಾನ್ವಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳ ಪಾತ್ರ ಮಹತ್ವದ್ದಾಗಿದೆ. ಮತದಾರರ ಪಟ್ಟಿ ನಿರ್ವಹಣೆ, ಹೊಸ ಮತದಾರರ ಸೇರ್ಪಡೆ, ಮೃತರು ಹಾಗೂ ಸ್ಥಳಾಂತರಗೊಂಡವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು, ಮತದಾರರ ವಿವರಗಳ ತಿದ್ದುಪಡಿ ಸೇರಿ ಹಲವು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಸ್. ಪೂವಿತಾ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ ಬಿಎಲ್‌ಒ ಹಾಗೂ ಬಿಎಲ್‌ಎ (ಏಜೆಂಟರು) ಸಮನ್ವಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮತಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮತದಾರ ಮಾಹಿತಿಯನ್ನು ಸಂಪೂರ್ಣವಾಗಿ ಬಿಎಲ್‌ಒ ಹಾಗೂ ಬಿಎಲ್‌ಎಗಳಿಗೆ ನೀಡಿ ಕರಡು ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಮತದಾರರ ಪಟ್ಟಿಯು ಚುನಾವಣಾ ಪ್ರಕ್ರಿಯೆಯ ಮೂಲ ಆಧಾರವಾಗಿದ್ದು, ಅದರ ಶುದ್ಧತೆ ಮತ್ತು ನಿಖರತೆ ಕಾಪಾಡುವುದು ಬಿಎಲ್‌ಒಗಳ ಕರ್ತವ್ಯ. ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲಿಸುವುದು, 18 ವರ್ಷ ಪೂರೈಸಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ, ಆನ್‌ಲೈನ್ ಅರ್ಜಿಗಳ ಪರಿಶೀಲನೆ, ವಿವಿಧ ಅರ್ಜಿಗಳ ಬಳಕೆ, ಚುನಾವಣಾ ಆಯೋಗದ ಡಿಜಿಟಲ್ ಅಪ್ಲಿಕೇಷನ್‌ಗಳ ಉಪಯೋಗ, ಮತದಾರರ ಗುರುತಿನ ಚೀಟಿ ಸಂಬಂಧಿತ ಕಾರ್ಯಗಳು ಹಾಗೂ ಕ್ಷೇತ್ರ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನಗಳ ಕುರಿತು ತರಬೇತಿ ನೀಡಲಾಯಿತು.
ಶಾಸಕ ಹಂಪಯ್ಯ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲ, ರಾಜಾ ರಾಮಚಂದ್ರ ನಾಯಕ, ಸೈಯದ್ ಖಾಲಿದ್ ಖಾದ್ರಿ, ಗಂಗಣ್ಣ ಸಾಹುಕಾರ, ಶಿವರಾಜ ನಾಯಕ ವಕೀಲ, ತಿಪ್ಪಣ್ಣ ಬಾಗಲವಾಡ ವಕೀಲ, ಈರಣ್ಣ ಮರ್ಲಟ್ಟಿ, ಶಿವಕುಮಾರ್ ಚುಕ್ಕಿ, ಮೌನೇಶಗೌಡ ರಾಜಲದಿನ್ನಿ, ಸಣ್ಣ ಬಸನಗೌಡ ಬ್ಯಾಗವಾಟ, ಮಾನ್ವಿ, ಸಿರವಾರ ತಾಲೂಕುಗಳ ಬಿಎಲ್‌ಒ ಹಾಗೂ ಬಿಎಲ್‌ಎಗಳು ಹಾಜರಿದ್ದರು.