ಸಿರವಾರ ತಾಲೂಕಿನ ಸಿಂಗಡದಿನ್ನಿ ಗ್ರಾಮದಲ್ಲಿ ನೀರು ಶುದ್ದಕರಣ ಘಟಕ ರಿಪೇರಿಯಾಗಿದ್ದತಿಂದ ನೀರು ಪಾಚಿಗಟ್ಟಿರುವುದು.
- 53 ಗ್ರಾಮಗಳ ಜನ ನೀರಿಗಾಗಿ ಪರದಾಟ
- ಕೆರೆಗಳು ತುಂಬಿದ್ದರು ತಪ್ಪುತ್ತಿಲ್ಲ ಸಮಸ್ಯೆ
- ಸಿರವಾರ ತಾಲೂಕಿನ ಸಿಂಗಡದಿನ್ನಿ, ಗಣದಿನ್ನಿ, ಶಾಖಾಪುರ ಗ್ರಾಮದಲ್ಲಿ ಕಳೆದ ಸುಮಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ.
ಜಿಲ್ಲೆಯ ಎಡ ಮತ್ತು ಬಲಭಾಗದಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜಿಲ್ಲೆಯ ಶೇ.30ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ, ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಕಿಲೋಮೀಟರ್‌ಗಟ್ಟಲೇ ದೂರ ಅಲೆದಾಡಿ ನೀರು ತರುವ ಪರಿಸ್ಥಿತಿ ಎದುರಾಗಿದೆ.
ಸಿರವಾರ ತಾಲೂಕಿನ ಸಿಂಗಡದಿನ್ನಿ, ಗಣದಿನ್ನಿ, ಶಾಖಾಪುರ ಗ್ರಾಮದಲ್ಲಿ ಕಳೆದ ಸುಮಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ. ನೂರಾರು ಜನಸಂಖ್ಯೆ ಹೊಂದಿದ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಕೆರೆಯಲ್ಲಿ ನೀರಿದ್ದರು, ಶುದ್ಧ ಕುಡಿಯುವ ಘಟಕ ರಿಪೇರಿಯಾಗಿದ್ದರಿಂದ ಯೋಗ್ಯವಾಗಿಲ್ಲವೆಂದು ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 179 ಗ್ರಾಮ ಪಂಚಾಯಿತಿಗಳ ಪೈಕಿ ಶೇ.50 ರಷ್ಟು ಪಿಡಿಒಗಳಿಗೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಜನರು ಮನವಿ ಪತ್ರ ಕೊಡುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಗ್ರಾಮಸ್ಥರು ಸಹನೆ ಕಳೆದುಕೊಳ್ಳಲು ಆರಂಭಿಸಿದ್ದಾರೆ. ಸಮಸ್ಯೆಗೆ ಪರಿಹರಿಸಬೇಕಿದ್ದ ಅಧಿಕಾರಿಗಳು ಕುಡಿಯಲು ನೀರು ಕೇಳಿದ ಗ್ರಾಮಸ್ಥರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಜನರಲ್ಲಿ ಆಕ್ರೋಶ ಹೆಚ್ಚಿಸಿದೆ. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ಅನುಷ್ಠಾನಗೊಳಿಸಿದರೂ ಐದು ವರ್ಷಗಳಿಂದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಯೋಜನೆಯ ಉದ್ದೇಶವೇ ಸಫಲವಾಗಿಲ್ಲ. ಪರಿಣಾಮ ಜನ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಬೇಕಾಗಿದೆ.
ಎಷ್ಟು ಗ್ರಾಮದಲ್ಲಿ ಸಮಸ್ಯೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಧಿಕಾರಿಗಳ ಮಾಹಿತಿ ಪ್ರಕಾರ 35 ಗ್ರಾಪಂಗಳಲ್ಲಿ ಒಟ್ಟು 53 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲಾಗುತ್ತಿದ್ದು, ಈ ಪೈಕಿ ದೇವದುರ್ಗ 02,ಅರಕೇರಾ 5,ಲಿಂಗಸುಗೂರು 13, ಸಿರವಾರ 2, ರಾಯಚೂರು 17, ಸಿಂಧನೂರು 11, ಮಸ್ಕಿ 3 ಗ್ರಾಮಗಳ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಜಿಲ್ಲಾಡಳಿತದಿಂದ 62 ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಂದು ಮಾಹಿತಿ ನೀಡಿದ್ದಾರೆ. ಮೇ ಮಧ್ಯಂತರದಲ್ಲಿ ಅಕಾಲಿಕ ಮಳೆ ಬಾರದಿದ್ದರೆ ಮತ್ತಷ್ಟು ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದರೆ ಆದರೆ ವಿಪರ್ಯಾಸವೆಂದರೆ ಮಾನ್ವಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದು ಮಾಹಿತಿ ನೀಡಿದ್ದಾರೆ.
ಕೆರೆಗಳು ತುಂಬಿದ್ದರು ತಪ್ಪುತ್ತಿಲ್ಲ ಸಮಸ್ಯೆ
ಜಿಲ್ಲೆಯಲ್ಲಿ ಒಟ್ಟು 266 ಕೆರೆಗಳಿವೆ. ಸಿಂಧನೂರಲ್ಲಿ 153 , ಸಿರವಾರ ತಾಲ್ಲೂಕಿನಲ್ಲಿ 44 , ಮಸ್ಕಿಯಲ್ಲಿ 25, ರಾಯಚೂರಲ್ಲಿ 15 , ಮಾನ್ವಿಯಲ್ಲಿ 18 , ಲಿಂಗಸುಗೂರಲ್ಲಿ 02 ಹಾಗೂ ಅರಕೇರಾದಲ್ಲಿ 09 ಕುಡಿಯುವ ನೀರಿನ ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಅರ್ಧದಷ್ಟು ಖಾಲಿ ಆಗಿವೆ. 05 ಕೆರೆಗಳು ಸಂಪೂರ್ಣ ಖಾಲಿ ಆಗಿವೆ. ಕೆಲ ಕೆರೆಗಳು ಭರ್ತಿಯಾಗಿದ್ದರು ನೀರು ಕುಡಿಯಲು ಯೋಗ್ಯವಾಗಿಲ್ಲ.