ಮುದಗಲ್‌ನ ಕೋಟೆ ಮುಂಭಾಗದ ಟಿಸಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಜೆಸ್ಕಾಂ ಸಿಬ್ಬಂದಿ.  
ರಾಯಚೂರು

ವಿದ್ಯುತ್ ಕಡಿತದಿಂದ ಬಸವಳಿದ ಜನರು

ನರೇಶ್ ಕುಮಾರ್
ಮುದಗಲ್: ಪಟ್ಟಣದ 110 ಕೆವಿ ವಿದ್ಯುತ್ ಸರಬರಾಜು ಘಟಕದಲ್ಲಿನ ಫೀಡರ್ ಹಾಗೂ ಟಿಸಿಗಳ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಭಾನುವಾರ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು. 
ದುರಸ್ತಿ ಕಾರಣ ಬೆಳಗ್ಗೆಯಿಂದ ಸಂಜೆ 5.30ರ ವರೆಗೂ ಪಟ್ಟಣ ಮತ್ತು ಕೆಲ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದರಿಂದ ವಿದ್ಯುತ್ ಅವಲಂಬಿತ ವಿವಿಧ ಕೆಲಸಗಳು ನಿಲುಗಡೆ ಮಾಡಬೇಕಾಯಿತು. 
ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಜನರು ಫ್ಯಾನ್, ಎಸಿ ಇಲ್ಲದೆ ಬೆವರಿದರು. ಕೋಟೆ ಕಂದಕದ ಮುಂಭಾಗ, ಬಸ್ ನಿಲ್ದಾಣ ಹತ್ತಿರ, ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಟಿಸಿ ಸೇರಿದಂತೆ ಫೀಡರ್ ಗಳ ದುರಸ್ತಿ, ಜೋತುಬಿದ್ದ ವೈರ್‌ಗಳ ಸ್ಥಳಾಂತರ, ಜಂಗಲ್ ಕಟಿಂಗ್ ಮತ್ತು ಟಿಸಿ, ವಿದ್ಯುತ್ ಕಂಬಗಳ ಬದಲಾವಣೆ ನಂತರ ಸಂಜೆ ವಿದ್ಯುತ್ ಪೂರೈಸಿದ್ದರಿಂದ ಜನ ನಿಟ್ಟುಸಿರು ಬಿಡುವಂತಾಯಿತು.