ದೇವದುರ್ಗದ ಹಳೇ ಬಸ್ ನಿಲ್ದಾಣ ಏರಿಯಾದಲ್ಲಿ ವಿದ್ಯುತ್ ಕಂಬ ಬಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜೆಸ್ಕಾಂ ಎಇಇ ಶ್ರೀನಿವಾಸ್ ರಾಜು ಭೇಟಿನೀಡಿ ಪರಿಶೀಲಿಸಿದರು.
- ಗಾಳಿ-ಮಳೆಗೆ ಧರೆಗುರುಳಿದ ಕಂಬಗಳು, ಮರಗಳು
- ವಿದ್ಯುತ್ ಇಲ್ಲದೆ ಜಾಗರಣೆ, ಸಿಡಿಲಿಗೆ ದನಗಳು ಬಲಿ
ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಅವಘಡ ಸಂಭವಿಸಿದ್ದು, ವಿದ್ಯುತ್ ಕಡಿತದಿಂದ ಜನರು ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು.
ಜಾಲಹಳ್ಳಿ ಸಮೀಪದ ನವಿಲುಗಡ್ಡದಲ್ಲಿ ಬಸವರಾಜ ಎಂಬುವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಜಂಬಲದಿನ್ನಿಯಲ್ಲಿ ಬೃಹತ್ ಮರದ ಟೊಂಗೆ ಮುರಿದು ಬಿದ್ದಿದೆ. ಅಲ್ಲದೆ ವಿವಿಧೆಡೆ ಮರಗಳು ನೆಲಕ್ಕುರುಳಿವೆ. ಜಾಲಹಳ್ಳಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು ಹೊಲ, ಗದ್ದೆಗಳ ವಡ್ಡುವಾರಿ ತುಂಬಿ ಹರಿಯುತ್ತಿವೆ. ವಾತಾವರಣದಲ್ಲಿ ಬದಲಾವಣೆಯಾಗಿದ್ದು ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ಮಳೆ ತಂಪೆರೆದಿದೆ.
ಪಟ್ಟಣದ ಗೌರಂಪೇಟೆ ಏರಿಯಾ, ಪಟೇಲ್ ಓಣಿ ಸೇರಿ ವಿವಿಧೆಡೆ ವಿದ್ಯುತ್ ಕಂಬಗಳು, ಮರಗಳು ಮುರಿದುಬಿದ್ದಿವೆ. ಇದಲ್ಲದೆ ಗಬ್ಬೂರು, ಖಾನಾಪುರ, ಮಸರಕಲ್, ನವಿಲುಗುಡ್ಡ, ಜಂಬಲದಿನ್ನಿ, ಹೊಸೂರು ಸಿದ್ದಾಪುರ, ಜಾಲಹಳ್ಳಿ, ಗಾಣಧಾಳ, ಕಮಲದಿನ್ನಿ ಸೇರಿ ವಿವಿಧೆಡೆ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಗಿಂತ ಸಿಡಿಲು ಗುಡುಗಿನ ಅರ್ಭಟ ಜೋರಾಗಿತ್ತು.
ಪಟ್ಟಣದ ವಿವಿಧೆಡೆ ಕಂಬ ಬಿದ್ದ ಸ್ಥಳಕ್ಕೆ ಜೆಸ್ಕಾಂ ಎಇಇ ಶ್ರೀನಿವಾಸ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಜೋಡಣೆ ಕಾರ್ಯ ಕೈಗೊಳ್ಳಲಾಯಿತು. ಗ್ರಾಮೀಣ ಭಾಗದಲ್ಲಿ ಬಿದ್ದ ಕಂಬಗಳು ಜೋಡಣೆ ಕಾರ್ಯ ಸಾಗಿದ್ದು, ಸಿಬ್ಬಂದಿ ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಜೆಸ್ಕಾಂ ಸಹಾಯಕ ಇಂಜಿನಿಯರ್ ವೆಂಕಟೇಶ ಚಿಲ್ಕರಾಗಿ ತಿಳಿಸಿದ್ದಾರೆ.