ರಾಯಚೂರಿನ ಸಿಯಾತಲ ಬಡಾವಣೆಯಲ್ಲಿ ಹಿರಿಯ ನಾಗರಿಕರ ಮನೆಗಳಿಗೆ ಭಾನುವಾರ ಡಿವೈಎಸ್ಪಿ ಶಾಂತವೀರ ಈ. ಭೇಟಿ ನೀಡಿದರು.
ಮಕ್ಕಳು ಬೆಳೆದು ದೊಡ್ಡವರಾಗಿ ಉದ್ಯೋಗಕ್ಕಾಗಿ ವಿದೇಶಕ್ಕೋ ಅಥವಾ ದೂರದ ಊರುಗಳಿಗೋ ಹೋದಾಗ, ಮನೆಯಲ್ಲಿ ಉಳಿಯುವುದು ಕೇವಲ ನೆನಪುಗಳು ಮತ್ತು ವೃದ್ಧ ತಂದೆ-ತಾಯಿಗಳು ಮಾತ್ರ. ಇಂತಹ ಸಮಯದಲ್ಲಿ ಸಂಜೆ ಕತ್ತಲಾಗುತ್ತಿದ್ದಂತೆ ಎಲ್ಲಿಲ್ಲದ ಆತಂಕ ಶುರುವಾಗುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ಹಿರಿಯರ ಮೊಗದಲ್ಲಿ ನಗು ತರಲು ಮತ್ತು ಅವರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಮನೆಮನೆಗೆ ಪೊಲೀಸ್ ಯೋಜನೆ ಮೂಲಕ ಸಾರ್ವಜನಿಕರ ರಕ್ಷಣೆ ಜತೆಗೆ ಹಿರಿಯ ನಾಗರಿಕರ ಮನೆಗೆಳಿಗೆ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ.
ಪೊಲೀಸರು ಕೇವಲ ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವುದಲ್ಲದೆ, ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದೇ ಈ ಪರಿಕಲ್ಪನೆಯ ಉದ್ದೇಶವಾಗಿದೆ. ಈ ಸದುದ್ದೇಶದ ಮಹತ್ವಾಕಾಂಕ್ಷಿ ಪರಿಕಲ್ಪನೆಯನ್ನು ಜನಪಯೋಗಿ ರೀತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಗ್ಶು ಗಿರಿ ಜಿಲ್ಲೆಯ ಸಾರ್ವಜನಿಕರಿಗೆ ಮನವರಿಕೆ ಮಾಡಿ ಪೊಲೀಸ್ ಇಲಾಖೆಯನ್ನು ಸಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ಪೊಲೀಸರು ನಾಗರಿಕರ ಜತೆಗೆ ಜನಸ್ನೇಹಿ ಪೊಲೀಸರಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಇದರ ಜತೆಗೆ ಹಿರಿಯ ನಾಗರಿಕರೆಗೆ ಮನೆ ಮಕ್ಕಳಂತೆ ದೈರ್ಯ ತುಂಬುವ ಕೆಲಸ ಜಿಲ್ಲೆಯ ಪೊಲೀಸರು ಮಾಡುತ್ತಿದ್ದಾರೆ. ರಾಯಚೂರು ಉಪ ವಿಭಾಗದ ಡಿವೈಎಸ್ಪಿ ಶಾಂತವೀರ ಈ. ಭಾನುವಾರ ವಿಭಾಗದ 11 ಠಾಣೆ ವ್ಯಾಪ್ತಿಯ ಗ್ರಾಮ ಹಾಗೂ ನಗರದ ಪ್ರದೇಶಗಳಲ್ಲಿ ವಾಸ ಮಾಡುವ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ, ಸಮಸ್ಯೆಯನ್ನು ಹರಿತು ಹಿರಿಯ ನಾಗರಿಕರ ಮಕ್ಕಳಿಗೆ ತಂದೆ- ತಾಯಿಯ ಆರೈಕೆಯ ಕುರಿತು ತಿಳಿ ಹೇಳುವ ಕೆಲಸ ಮಾಡಿದ್ದಾರೆ.
ನಗರದ ಸಿಯಾತಲಭ ಬಡಾವಣೆಯಲ್ಲಿ ರಾತ್ರಿ ಭೇಟಿ ನೀಡಿದಾಗ ಅನೇಕರು ಹಿರಿಯರ ಮಕ್ಕಳು ವಿದೇಶ ಅಥವಾ ಬೇರೆ ನಗರಗಳಲ್ಲಿದ್ದು, ಹಿರಿಯ ನಾಗರಿಕರು ಮನೆಯಲ್ಲಿ ಒಬ್ಬರೇ ಇರುವುದರಿಂದ ರಕ್ಷಣೆಯ ಅಭಾವ, ಕೆಲವು ಪ್ರಕರಣಗಳಲ್ಲಿ ಮಕ್ಕಳು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು ತಂದೆ-ತಾಯಿಯನ್ನು ನಿರ್ಲಕ್ಷಿಸುತ್ತಿದ್ದಾರೆ.
ವಯಸ್ಸಾದವರನ್ನು ಮನೆಯಿಂದ ಹೊರಹಾಕಿರುವ ಘಟನೆಗಳೂ ವರದಿಯಾಗಿವೆ. ಇಂತಹ ಒಂದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹಿರಿಯ ನಾಗರಿಕರ ಮಕ್ಕಳಿಗೆ ಬುದ್ಧಿವಾದ ಹೇಳಿ ತಂದೆ-ತಾಯಿಯನ್ನು ಮತ್ತೆ ಮನೆಯೊಳಗೆ ಸೇರಿಸಲಾಗಿದೆ. ಇದರ ಜತೆಗೆ ಮನೆಯ ಸುತ್ತಮುತ್ತ ಯುವಕರು ಗುಂಪು ಸೇರಿ ಗದ್ದಲ ಮಾಡುವುದು ಅಥವಾ ಧೂಮಪಾನ ಮಾಡುವುದು. ಮನೆಗಳ ಮುಂದೆ ವಾಹನ ನಿಲುಗಡೆ ಮಾಡುವ ವಿಚಾರವಾಗಿ ಆಗುವ ಕಿರಿಕಿರಿಗಳು ಸಮಸ್ಯೆಗಳನ್ನು ಹೇಳಲಾಗುತ್ತಿದೆ.