ಅರಕೇರಾ ತಾಲೂಕಿನ ಜಾಗಟಗಲ್ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು. ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರಿನ ಬೂದಿಬಸವ ಶಿವಾಚಾರ್ಯರು ಇತರರಿದ್ದರು.  
ರಾಯಚೂರು

ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಚನ
  • ಜಾಗಟಗಲ್‌ನಲ್ಲಿ ಸಾಮೂಹಿಕ ವಿವಾಹ, ಧರ್ಮಸಭೆ
ಅರಕೇರಾ: ಜಗದ್ಗುರು ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ ಹಾಗೂ ವಿಶ್ವಕ್ಕೆ ಶಾಂತಿ ದೊರಕಲಿ ಎಂಬ ಮಹತ್ವದ ಆಶಯ ಹೊಂದಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪೀಠದ ಡಾ.ವೀರಸೋಮೇಶ್ವರ  ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಜಾಗಟಗಲ್ ಗ್ರಾಮದ ಶರಣ ರಾಚಯ್ಯಪ್ಪ ತಾತನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ, ಕುಂಭೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ವೀರಶೈವ ಧರ್ಮದ ಪಂಚಾಚಾರ್ಯರು ಮಾನವೀಯ ಮೌಲ್ಯಗಳು ಹಾಗೂ ತತ್ವೋಪದೇಶಗಳನ್ನು ಬೋಧಿಸಿ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪಿಸಲು ಶ್ರಮಿಸಿದ್ದಾರೆ. ಶರಣರು, ಸಂತರು ಸಮಾನತೆ, ಶಾಂತಿ ಮತ್ತು ಸಮೃದ್ಧಿಗಾಗಿ ದುಡಿದರು. ಆದರೆ, ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಅಶಾಂತಿ, ಅತೃಪ್ತಿ ಹೆಚ್ಚಾಗುತ್ತಿದ್ದು, ಧರ್ಮವನ್ನು ಜಾತಿಗೆ ಜೋಡಿಸಿ ಸಮಾಜದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅಶಾಂತಿ ದೂರವಾಗಿ ನೆಮ್ಮದಿಯ ಬದುಕು ಸಾಧಿಸಬೇಕಾದರೆ ಪ್ರತಿಯೊಬ್ಬರೂ ಮಾನವ ಧರ್ಮಕ್ಕೆ ಜಯವಾಗಲಿ ಮತ್ತು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ದೊರಕಲಿ ಎಂಬ ಧ್ಯೇಯ ಮೈಗೂಡಿಸಿಕೊಳ್ಳಬೇಕು ಎಂದರು. 
 ಶಾಸಕಿ ಕರೆಮ್ಮ ನಾಯಕ ಮಾತನಾಡಿ, ಪುಣ್ಯಭೂಮಿಯಲ್ಲಿ ವಿವಾಹವಾದ ನೀವು ಧನ್ಯರು. ಎರಡು ಕುಟುಂಬಗಳ ಪ್ರೀತಿ ಮತ್ತು ವಿಶ್ವಾಸವನ್ನು ಕಟ್ಟುವ ಮಹತ್ವದ ಬಂಧವೇ ವಿವಾಹ. ನವದಂಪತಿಗಳು ಮಾದರಿ ಜೀವನ ನಡೆಸಬೇಕು ಎಂದು ಆಶಿಸಿದರು. 
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ, 50 ವರ್ಷಗಳಿಂದ ಆಳ್ವಿಕೆ ಮಾಡಿದ ಸರ್ಕಾರಗಳು ಮಾಡದ ಹಲವಾರು ಕಾರ್ಯಗಳನ್ನು ವೀರಶೈವ-ಲಿಂಗಾಯತ ಮಠಗಳು ಮಾಡುತ್ತಿವೆ. ಯಾವುದೇ ಬೇಧವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರು ಬೂದಿಬಸವೇಶ್ವರ ಸಂಸ್ಥಾನ ಮಠದ ಬೂದಿಬಸವ ಶಿವಾಚಾರ್ಯರು, ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು ಇತರರಿದ್ದರು. 
ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಜಾನಪದಾ ಕಲಾ ತಂಡ, ವಾದ್ಯ ಮೇಳ ಕಲಾವಿದರು ಸಾಥ್ ನೀಡಿದರು. ನೂರಾರು ಮಹಿಳೆಯರು ಕುಂಭ, ಕಳಸ ಹಿಡಿದು ಸಾಗಿದರು. ಗ್ರಾಮದ ಹೊರವಲಯದಿಂದ ವೇದಿಕೆವರೆಗೆ ಮೆರವಣಿಗೆ ನಡೆಯಿತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ 30 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನೆರವೇರಿತು. ಉಚಿತವಾಗಿ ತಾಳಿ, ಬಟ್ಟೆ ,ಉಂಗುರ ನೀಡಿ ಶ್ರೀಗಳು ಆಶೀರ್ವದಿಸಿದರು. ಹಾಗೆಯೇ ದೇವರ ಮೂರ್ತಿಗಳ ಪ್ರತಿಷ್ಠಾಪನೆ, ಬುಡ್ಡೆಕಲ್ಲು ಪ್ರತಿಷ್ಠಾಪನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
"

ಸನಾತನ ಧರ್ಮದಲ್ಲಿ ಮಹಿಳೆಗೆ ಉನ್ನತ ಸ್ಥಾನವಿದ್ದು, ನಾವು ಮಹಿಳೆಯನ್ನು ಗೌರವದಿಂದ ಕಾಣುತ್ತೇವೆ. ಸಾಮೂಹಿಕ ವಿವಾಹಗಳು ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆಯಾಗಿದೆ. ತಂದೆ-ತಾಯಿ, ಗುರುಗಳು ಹಾಗೂ ಹಿರಿಯರ ಮಾರ್ಗದರ್ಶನ ಜೀವನಕ್ಕೆ ಪ್ರೇರಣೆ ಮತ್ತು ರಕ್ಷಣೆಯಾಗಿದ್ದು, ಅವರನ್ನು ಗೌರವದಿಂದ ಕಾಣಬೇಕು. ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮದಿಂದ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ.

 .