ರಾಯಚೂರಿನ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಚೇಗೆ 2025-26ನೇ ಸಾಲಿನ ದಿ.ಕೆ. ಜಯಾಚಾರ್ಯ ಕೊಪ್ಪರ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಸಾಂಸ್ಕೃತಿಕ ಚಿಂತಕ ಡಾ.ರವೀಂದ್ರ ಕುಷ್ಟಗಿ ದಂಪತಿಗಳಿಗೆ ನೀಡಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ, ಸಾಹಿತಿಗಳಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ,ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಕೋಶಾಧ್ಯಕ್ಷರಾದ ಸೈಯದ್ ಹಫೀಜುಲ್ಲಾ ಖಾದ್ರಿ, ಹನುಮಂತರಾವ್ ಕುಲಕರ್ಣಿ, ಹರೀಶ್ ಕೊಪ್ಪರ ಇದ್ದರು. 
ರಾಯಚೂರು

ಜೀವನದಲ್ಲಿ ಶಾಂತಿ, ನೆಮ್ಮದಿ ಕಡಿಮೆಯಾಗುತ್ತಿದೆ- ಡಾ.ರವೀಂದ್ರ ಕುಷ್ಟಗಿ

ರಾಯಚೂರು ಜೀವನದಲ್ಲಿ ಶಾಂತಿ ನೆಮ್ಮದಿ ಕಡಿಮೆಯಾಗುತ್ತಿದೆ. ಇವುಗಳನ್ನು ಕಾಪಾಡಿಕೊಳ್ಳಬೇಕಾದರೆ ನಾವೆಲ್ಲ ಸಾಹಿತ್ಯದ ಕಡೆ ವಾಲಬೇಕೆಂದು ಬೆಂಗಳೂರಿನ ಸಾಂಸ್ಕೃತಿಕ ಚಿಂತಕ ಡಾ.ರವೀಂದ್ರ ಕುಷ್ಟಗಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಚೆಗೆ 2025-26ನೇ ಸಾಲಿನ ದಿ. ಕೆ. ಜಯಾಚಾರ್ಯ ಕೊಪ್ಪರ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ವಿಶೇಷವಾಗಿ ದಾಸ ಸಾಹಿತ್ಯವನ್ನು ಪ್ರಯತ್ನ ಮಾಡಬೇಕು. ಈ ನಾಡಿಗೆ ಸಮಾನತೆಯನ್ನು ತಂದು ಕೊಟ್ಟ ಸಾಹಿತ್ಯ. ದಾಸರ ಕೀರ್ತನೆಗಳಲ್ಲಿ ಜೀವನದ ನೈತಿಕತೆಯನ್ನು ಸಾರುತ್ತದೆ. ಹಾಗಾಗಿ ಆ ತಪ್ಪುಗಳನ್ನು ಅಳವಡಿಸಿಕೊಂಡು ನಾವು ಅದೇ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ದತ್ತಿ ಉಪನ್ಯಾಸಗಳು ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ. ದಾಸರ, ಶರಣರ, ಸೂಫಿ ಸಂತರ ಸಾಹಿತ್ಯ ಅನೇಕ ದಿಗ್ಗಜರ ಮೌಲ್ಯಗಳನ್ನು ಸ್ಮರಿಸುವಂತಹ ಕಾರ್ಯಕ್ರಮಗಳಾಗಿವೆ. ನೆಲದಲ್ಲಿ ಅನೇಕ ಸಂತರು, ದಾಸರು ಹುಟ್ಟಿದ ನೆಲ ಇದು. ಇಂತಹ ಕಾರ್ಯಕ್ರಮಗಳ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುವುದು ತುಂಬಾ ಉತ್ತಮವಾದ ಕೆಲಸ ಎಂದು ಹೇಳಿದರು.
ದಿ. ಪ್ರಹ್ಲಾದಾಚಾರ್ಯ ಜೋಶಿಯವರ ಸ್ಮರಣಾರ್ಥ ದತ್ತಿ ದಾನಿ ಡಾ. ತ್ರಿವಿಕ್ರಮ ಜೋಶಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯವನ್ನು ಪುಸ್ತಕ ಮೂಲಕ ಓದಿ ತಿಳಿಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಡಿಜಿಟಲ್ ಮೂಲಕ ಜನರನ್ನು ತಲುಪುವ ಕೆಲಸ ಮಾಡಬೇಕಾಗಿದೆ. ಹೀಗೆ ಮಾಡಿದಾಗ ಮಾತ್ರ ನಾವು ಸಾಹಿತ್ಯವನ್ನು ಇನ್ನು ಹೆಚ್ಚು ಜನಸಾಮಾನ್ಯರ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ,ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಕೋಶಾಧ್ಯಕ್ಷರಾದ ಸೈಯದ್ ಹಫೀಜುಲ್ಲಾ ಖಾದ್ರಿ, ಹನುಮಂತರಾವ್ ಕುಲಕರ್ಣಿ, ಹರೀಶ್ ಕೊಪ್ಪರ, ರಾವುತ್‌ರಾವ್ ಬರೂರ ಸೇರಿ ಅನೇಕರು ಇದ್ದರು.