ರಾಯಚೂರು ನೀವೇಶನ ಖಾತಾ ಮಾಡಿ ಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಅವರ ಪತಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಬೀಜನಗೆರಾ ಪಿಡಿಒ ಲಕ್ಷ್ಮೀ ಹಾಗೂ ಆಕೆಯ ಪತಿ ಶ್ರೀಧರ ಬ್ಯಾಡಗಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೀಜನಗೇರಾ ಗ್ರಾಪಂ ವ್ಯಾಪ್ತಿಯ ಉಮ್ರಾಳದೊಡ್ಡಿ ಗ್ರಾಮದಲ್ಲಿ ಮೆಹಬೂಬ್ ಎಂಬವರು 2 ಎಕರೆ 6 ಗುಂಟೆ ಜಮೀನಿನಲ್ಲಿ ಲೇಔಟ್ ಮಾಡಿದ್ದರು. ಇದಕ್ಕೆ ಖಾತಾ ಮಾಡಿಕೊಡಲು ಪಿಡಿಓ ಎರಡೂವರೇ ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ದೂರುದಾರ ಮೆಹಬೂಬ್ ಪಿಡಿಒ ಪತಿ ಶ್ರೀಧರ ಬ್ಯಾಡಗಿಯ ಖಾತೆಗೆ ಒಂದೂವರೆ ಲಕ್ಷ ರೂ. ಫೋನ್ ಪೇ ಮೂಲಕ ಹಾಕಿದ್ದರು.
ಬಾಕಿ ಹಣ ಕೊಡುವುದಾಗಿ ಹೇಳಿದ್ದ ದೂರುದಾರ ಹಿಂದೆ ಹಣ ಹಾಕಿದ್ದ ಸ್ಕ್ರೀನ್ ಶಾಟ್ಗಳ ಸಹಿತ ಲೋಕಾಯುಕ್ತರಿಗೆ ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ಪೊಲೀಸರು ಪಿಡಿಒ ಮತ್ತು ಅವರ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.