ದೇವದುರ್ಗದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಗ್ರಾಪಂ ನೌಕರರ ಸಂಘಟನೆ ಮನವಿ ಸಲ್ಲಿಸಿತು. ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಹೊನ್ನಪ್ಪ ನಾಯಕ, ಪಾಂಡುರಂಗ ನಾಯಕ, ಪಂಚಯ್ಯ, ಶಿವರಾಜ ಮಲದಕಲ್, ಮರೆಪ್ಪ, ಕಾಸಿಲಿಂಗ ಇತರರಿದ್ದರು. 
ರಾಯಚೂರು

ಪ್ರತಿ ತಿಂಗಳು ಸಂಬಳ ಕೊಡಿ

ಶಾಮಸುಂದರ್ ಕೊಪ್ಪಳಕರ್
ದೇವದುರ್ಗ: ಬಾಕಿ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘಟನೆ (ಸಿಐಟಿಯು ಸಂಯೋಜಿತ) ತಾಲೂಕು ಘಟಕ ಸೋಮವಾರ ಪಟ್ಟಣದಲ್ಲಿ ತಾಪಂ ವ್ಯವಸ್ಥಾಪಕ ಮಲ್ಲಿಕಾರ್ಜುನ ಕೊಪ್ಪರಗೆ ಮನವಿ ಸಲ್ಲಿಸಿತು.
ತಾಲೂಕಿನ 33 ಗ್ರಾಪಂಗಳಲ್ಲಿ ಹಲವು ವರ್ಷಗಳಿಂದ ನೌಕರರು ದುಡಿಯುತ್ತಿದ್ದು, ತಿಂಗಳಿಗೆ ಸರಿಯಾಗಿ ವೇತನ ನೀಡದೆ ಉಳಿಸಿಕೊಳ್ಳಲಾಗಿದೆ. ಬಿಲ್ ಕಲೆಕ್ಟರ್‌ಗಳು, ನೀರುಗಂಟಿಗಳು, ಕಸ ಗುಡಿಸುವವರು, ವಿವಿಧ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುತ್ತಾರೆ. ಸ್ವಚ್ಛತಾ ಕೆಲಸ, ನೀರು ಬಿಡುವುದು, ಕಸ ಗುಡಿಸುವುದು, ಅಧಿಕಾರಿಗಳ ಸೂಚನೆ ಮೇರೆಗೆ ತೆರಿಗೆ ಸಂಗ್ರಹ ಮಾಡುವುದು ಸೇರಿದಂತೆ ಇತರ ಕೆಲಸ ಮಾಡುತ್ತಿದ್ದೇವೆ. ಆದರೆ ಸರಿಯಾದ ಸಮಯಕ್ಕೆ ವೇತನ ನೀಡದ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸಂಘಟನೆ ಸದಸ್ಯರು ದೂರಿದರು.
ಕೂಡಲೇ ನೌಕರರ ಬಾಕಿ ವೇತನವನ್ನು ನೀಡಬೇಕು. ಗ್ರಾಪಂನಲ್ಲಿ ತೆರಿಗೆಯಿಂದ ಬರುವ ಆದಾಯದ ಶೇ.70 ಸಿಬ್ಬಂದಿ ವೇತನಕ್ಕೆ ಮೀಸಲಿಡಬೇಕು. ಇಎಫ್‌ಎಂಎಸ್ ಆಗದ ನೌಕರರಿಗೆ ಗೌರವಧನ ನೀಡಬೇಕು. ಪ್ರತಿ ತಿಂಗಳು ವೇತನ ನೀಡುವ ವ್ಯವಸ್ಥೆ ಎಲ್ಲ ಕಡೆ ಜಾರಿ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದರು.