ಸಿಂಧನೂರಿನಿಂದ ಹಂಪನಗೌಡ ಬಾದರ್ಲಿ ಅಭಿಮಾನಿಗಳು, ಮುಖಂಡರ, ಕಾರ್ಯಕರ್ತರು ಅಂಬಾಮಠದವರೆಗೆ ಪಾದಯಾತ್ರೆ ನಡೆಸಿದರು.
ಸಿಂಧನೂರು: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಹಂಪನಗೌಡ ಬಾದರ್ಲಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಹಾರೈಸಿ ಅವರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶುಕ್ರವಾರ ನಗರದ ಗಣೇಶ ಗುಡಿಯಿಂದ ಅಂಬಾಮಠದ ಅಂಬಾದೇವಿ ದೇವಸ್ಥಾನವರೆಗೆ ಪಾದಯಾತ್ರೆ ನಡೆಸಿದರು.
ಬೆಳಗ್ಗೆ ಎಪಿಎಂಸಿಯ ಗಣೇಶ ಗುಡಿಯಿಂದ ಆರಂಭವಾದ ಪಾದಯಾತ್ರೆ ವಾದ್ಯ ಮೇಳದೊಂದಿಗೆ ಗಾಂಧಿ ಸರ್ಕಲ್ ತಲುಪಿತು. ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿ ನಮಿಸಿ ಹೊಸಳ್ಳಿ ಕ್ರಾಸ್, ಶ್ರೀಪುರಂಜಂಕ್ಷನ್, ಗೊರೇಬಾಳಕ್ಯಾಂಪ್, ಗೊರೇಬಾಳ, ಬಂಗಾರಿಕ್ಯಾಂಪ್, ಲಕ್ಷ್ಮೀಕ್ಯಾಂಪ್, ರೌಡಕುಂದಾ ಮೂಲಕ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನ ತಲುಪಿತು. ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹಂಪನಗೌಡ ಬಾದರ್ಲಿ ಭಾವಚಿತ್ರ ಪ್ರದರ್ಶಿಸಿ ಘೋಷಣೆಗಳನ್ನು ಹಾಕಿದರು.
ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ತಾಲೂಕು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ದಢೇಸುಗೂರು, ಜಿಪಂ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡರ್, ಶಿವನಗೌಡ ಎಲೆಕೂಡ್ಲಿಗಿ, ರಾಜುಗೌಡ ಬಾದರ್ಲಿ, ಶರಣಪ್ಪ ರಡ್ಡೇರ್, ಶೇಖರಪ್ಪ ಗಿಣಿವಾರ, ಪುರಸಭೆ ಮಾಜಿ ಸದಸ್ಯ ಎನ್.ಅಮರೇಶ, ಶಿವಕುಮಾರ ಗುಂಜಳ್ಳಿ, ತಿಮ್ಮಣ್ಣ ಸಾಹುಕಾರ, ಶ್ರೀದೇವಿ ಶ್ರೀನಿವಾಸ, ಅಮರೇಗೌಡ ಬೊಮ್ಮನಾಳ, ಬಸವರಾಜ ಪೂಲಭಾವಿ, ಅಮರೇಗೌಡ ಕಾನಿಹಾಳ, ಮಲ್ಲನಗೌಡ ಗುಂಡ, ಬಸವರಾಜ ಸಿಂಧನೂರು, ಅಮರೇಗೌಡ ಹೊಸಮನಿ, ಶರಣಪ್ಪ ಉಪ್ಪಲದೊಡ್ಡಿ, ದುರುಗಪ್ಪ ಕಟಾಲಿ, ಅಮರೇಗೌಡ ಬಾದರ್ಲಿ ಇತರರಿದ್ದರು.