ಸಿಂಧನೂರಿನಲ್ಲಿ ತಹಸಿಲ್ ಕಚೇರಿಯ ಶಿರಸ್ತೇದಾರ್ ವೀಣಾಗೆ ಸಿಪಿಐ(ಎಂಎಲ್) ಲಿಬರೇಷನ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ರಾಘವೇಂದ್ರ ಉಪ್ಪಳ, ಬಸವರಾಜ ಕೊಂಡೆ ಇತರರಿದ್ದರು. 
ರಾಯಚೂರು

ಒಡಿಶಾ ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಆಕ್ರೋಶ

ಸಿಂಧನೂರು: ಒಡಿಶಾದ ಬುಡಕಟ್ಟು ಸಮುದಾಯದ ಜೀತು ಮುಂಡಾ ಅವರ ಮೇಲೆ ಸರ್ಕಾರಿ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ ಶನಿವಾರ ಸಿಪಿಐ(ಎಂಎಲ್) ಲಿಬರೇಷನ್ ಪದಾಧಿಕಾರಿಗಳು ತಹಸಿಲ್ ಕಚೇರಿಯ ಶಿರಸ್ತೇದಾರ್ ವೀಣಾಗೆ ಮನವಿ ಸಲ್ಲಿಸಿದರು. 
ಜೀತು ಅವರ ಸಹೋದರಿ ಕರ್ಳಾ ಮುಂಡಾ ಅವರು ಸಾವಿಗೂ ಮುನ್ನ ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ 20 ಸಾವಿರ ರೂ.  ಠೇವಣಿ ಇಟ್ಟಿದ್ದರು. ಆದರೆ, ಅಕಾಲಿಕ ನಿಧನದಿಂದ ಸಹೋದರಿ ಹಣ ವಾಪಸ್ ನೀಡುವಂತೆ ಜೀತು ಮುಂಡಾ ಅವರು ಹತ್ತಾರು ಸಲ ಬ್ಯಾಂಕ್‌ಗೆ ಅಲೆದಾಡಿದರೂ ಅಧಿಕಾರಿಗಳು ಅಗತ್ಯ ದಾಖಲೆ ನೀಡಬೇಕೆಂದು ಸತಾಯಿಸಿದ್ದಾರೆ. ಇದರಿಂದ ರೋಸಿಹೋದ ಜೀತು ಮುಂಡಾ ಅವರು ಸಮಾಧಿ ಅಗೆದು ಕೊಳೆತ ಸ್ಥಿತಿಯಲ್ಲಿದ್ದ ಸಹೋದರಿಯ ಶವವನ್ನು ಚೀಲದಲ್ಲಿ ಕಟ್ಟಿಕೊಂಡು ಬ್ಯಾಂಕ್‌ಗೆ ಬಂದಿದ್ದಾರೆ. ಈ ಘಟನೆಗೆ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆಯೇ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 
ಬ್ಯಾಂಕ್‌ಗಳಲ್ಲಿ ಬಡವರು, ಆದಿವಾಸಿಗಳು, ಶೋಷಿತ ಸಮುದಾಯಗಳಿಗೆ ಸಾಲ ನೀಡುವುದಿರಲಿ, ಠೇವಣಿಯಿಟ್ಟ ಹಣವನ್ನು ವಾಪಸ್ ನೀಡಲೂ ಸತಾಯಿಸಲಾಗುತ್ತಿದೆ. ಆದರೆ, ಸಾವಿರಾರು ಕೋಟಿ ರೂಪಾಯಿ ಹಣವನ್ನು ಉದ್ಯಮಿಗಳು, ಬಂಡವಾಳಶಾಹಿಗಳು ಹಾಗೂ ಹಣ ವಂಚಿಸುವವರಿಗೆ ನೀಡುವ ಮೂಲಕ ಆರ್ಥಿಕ ತಾರತಮ್ಯ ಎಣಿಸುತ್ತಿವೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಠಣಾ ತಾಲೂಕಿನ ದೈನಾಳಿ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ ಅವರ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ನೈತಿಕ ಹೊಣೆಹೊತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಕೂಡಲೇ ರಾಜೀನಾಮೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. 
ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಪ್ರಮುಖರಾದ ರಾಘವೇಂದ್ರ ಉಪ್ಪಳ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ತುಸಳಪ್ಪ ದಢೇಸುಗೂರು, ಹನುಮಂತ ಟೈಲರ್, ರಾಮಣ್ಣ, ಮಂಜುನಾಥ ಇದ್ದರು.