ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಸವಂತರಾಯಗೌಡ, ಸಮುದಾಯದ ಮುಖಂಡ ಎಸ್. ದೇವೇಂದ್ರಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಅಮೀನ್‌ಪಾಷಾ ದಿದ್ದಿಗಿ ಇದ್ದರು.
- ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ
- ಸಿಂಧನೂರು ಉಪವಾಸ ನಿರತ ಸತ್ಯಾಗ್ರಹಿಗಳ ಬೆಂಬಲಿಸಿ ಧರಣಿ
ಸಿಂಧನೂರು: ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮವನ್ನು ತೀವ್ರವಾಗಿ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ತಹಸಿಲ್ ಕಚೇರಿ ಎದುರು ಧರಣಿ ನಡೆಸಲಾಯಿತು. ಇದೇ ವೇಳೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೂ ಪ್ರತಿಭಟನಾಕಾರರು ಬೆಂಬಲ ವ್ಯಕ್ತಪಡಿಸಿದರು.
ಕಳೆದ 19 ದಿನಗಳಿಂದ ನಿರಶನ ನಿರತರಾಗಿರುವ ಸೋನಮ್ ವಾಂಗ್ಚುಕ್ ಮತ್ತು ಇತರರ ಆರೋಗ್ಯ ಗಣನೀಯವಾಗಿ ಹದಗೆಡುತ್ತಿದೆ. ಆದರೂ ಕೇಂದ್ರ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸ್ಪಂದಿಸಿಲ್ಲ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುವ ನಾಗರಿಕರಿಗೆ ಬೆಲೆಯೇ ಇಲ್ಲದಂತಾಗಿದ್ದು, ಇದು ಸರ್ಕಾರದ ಜೀವವಿರೋಧಿ ನೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಲ್ಲಿ ಪತ್ರಿಕೆ ತಯಾರಿಕಾ ಮಂಡಳಿಯ ಮಹಾರಾಷ್ಟ್ರ ಮೂಲದ ಸದಸ್ಯನೇ ಖಾಸಗಿ ಕೋಚಿಂಗ್ ಸೆಂಟರ್‌ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವುದು ಬಯಲಾಗಿದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದೊಂದು ದೊಡ್ಡ ಹಗರಣ ಎನ್ನುವುದು ಜಗಜ್ಜಾಹೀರಾಗಿದೆ. ಇದರಿಂದಾಗಿ ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರಿ ವಂಚನೆಯಾಗಿದೆ. ಇಷ್ಟೆಲ್ಲ ಅನಾಹುತಗಳಾಗಿದ್ದರೂ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಚಿವರು ಕಿಂಚಿತ್ತೂ ತುಟಿಬಿಚ್ಚದಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಧರಣಿಯಲ್ಲಿ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಸವಂತರಾಯಗೌಡ, ಸಮುದಾಯದ ಮುಖಂಡ ಎಸ್. ದೇವೇಂದ್ರಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಅಮೀನ್‌ಪಾಷಾ ದಿದ್ದಿಗಿ, ಸಿಪಿಐ ಮುಖಂಡ ಭಾಷುಮಿಯಾ, ಉಪನ್ಯಾಸಕ ಶಂಕರ ಗುರಿಕಾರ, ಡಿಎಸ್‌ಎಸ್ ಮೂರ್ತಿ ಬಣದ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಕೃಷ್ಣಮೂರ್ತಿ ಧುಮುತಿ, ಹನುಮೇಶ ಗುಡದೂರು, ರೈತ ಮುಖಂಡ ಬಸವರಾಜ ಗೋಡಿಹಾಳ, ಸಮ್ಮದ್ ಚೌದ್ರಿ, ಜಮಾಅತೆ ಇಸ್ಲಾಂ ಹಿಂದ್‌ನ ಹುಸೇನ್‌ಸಾಬ್, ವೆಂಕನಗೌಡ ಗದ್ರಟಗಿ, ಕಂಟೆಪ್ಪ, ಡಿ. ಎಚ್. ಕಂಬಳಿ, ನಾಗರಾಜ್ ಪೂಜಾರ್, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಬಸವರಾಜ ಬಾರ್ದಲಿ, ಗಂಗಮ್ಮ ಗೊರಬಾಳ, ಸರಸ್ವತಿ ಪಾಟೀಲ್, ಶಕುಂತಲಾ ಪಾಟೀಲ್, ಬಸವರಾಜ ಕೊಂಡೆ, ಬಸವರಾಜ ಹಸಮಕಲ್, ಡಾ. ಬಸವರಾಜ ನಾಯಕ ಇದ್ದರು.