ಸಿರವಾರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ಅಶೋಕ ಪವಾರ್ ನೇತೃತ್ವದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮುಸ್ಲಿಂ ಮುಖಂಡ ಮಹ್ಮದ್ ಹುಸೇನ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಇದ್ದರು. 
ರಾಯಚೂರು

ಖಬರಸ್ತಾನ್ ತಡೆಗೋಡೆ ವಿಳಂಬಕ್ಕೆ ಆಕ್ರೋಶ

ನರೇಶ್ ಕುಮಾರ್
ಸಿರವಾರ: ಪಟ್ಟಣದ ಬಸ್ ನಿಲ್ದಾಣ ಬಳಿ ಮುಖ್ಯರಸ್ತೆಯ ಎರಡು ಬದಿಯಲ್ಲಿರುವ ಖಬರಸ್ತಾನ್ ತಡೆಗೋಡೆ ನಿರ್ಮಾಣ ವಿಳಂಬ ಖಂಡಿಸಿ ಮುಸ್ಲಿಂ ಮುಖಂಡರು ಶುಕ್ರವಾರ ತಹಸಿಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 
ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ 5 ಲಕ್ಷ ರೂ. ಮೀಸಲಿಟ್ಟಿದೆ. ಯಾವ ಕಾರಣಕ್ಕೆ ಕಾಮಗಾರಿ ಆರಂಭಿಸಿಲ್ಲ. ವಿಳಂಬಕ್ಕೆ ವಕ್ಫ್ ಮಂಡಳಿಯ ಸ್ಥಳೀಯ ಸದಸ್ಯರು, ಪಪಂ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ನಂತರ ತಹಸೀಲ್ದಾರ್ ಅಶೋಕ ಪವಾರ್ ಅವರು ಪಪಂ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಮತ್ತು ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದರು. ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಮಾತನಾಡಿ, ಸ್ಥಳೀಯವಾಗಿ ಕೆಲ ಮುಖಂಡರಿಂದ ದೂರುಗಳು ಬಂದಿವೆ. ವಕ್ಫ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಖಬರಸ್ತಾನದ ಸಮರ್ಪಕ ಅಳತೆ ಮಾಡಿ ಕೊಟ್ಟರೆ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಮುಸ್ಲಿಮರು ಮಾತನಾಡಿ, ಸರ್ಕಾರ ಮತ್ತು ವಕ್ಫ್ ಮಂಡಳಿ ಆದೇಶದಂತೆ ಕೂಡಲೇ ಕಾಮಗಾರಿ ಆರಂಭಿಸಬೇಕು. ಯಾವುದೇ ನೆಪವೊಡ್ಡಿ ಕಡೆಗಣಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಮಹ್ಮದ್ ಹುಸೇನ್, ಖಾಜಿ ಮಂಜೂರು ಪಾಷಾ, ಖಾಜಿ ನವಾಜ್, ಬಷೀರಸಾಬ್, ಇರ್ಫಾನ್ ಬಡೇಗರ್, ಬಾಬಲಿ, ರಾಜು, ಎಂ.ಡಿ.ವಾಹಿದ್, ಷರೀಫ್ ಮರಾಟ ಇತರರಿದ್ದರು.