ಮಸ್ಕಿಯಲ್ಲಿ ಉಪ ತಹಸೀಲ್ದಾರ್ ಪ್ರಕಾಶಗೆ ಜೋಳ ಬೆಳೆಗಾರರು ಮನವಿ ಸಲ್ಲಿಸಿದರು. ರೈತರಾದ ಸಿದ್ದಯ್ಯಸ್ವಾಮಿ, ಮರಿಯಪ್ಪ ಹುಲ್ಲೂರು, ಕೆಂಚಣ್ಣ ಎರಡ್ಡಿ, ಮೌನೇಶ ಅಂಗಡಿ, ಬೀರಪ್ಪ ಅಗಸಿಮನೆ, ವಂದೇಲಪ್ಪ, ಪವನಕುಮಾರ ಅಂಗಡಿ, ಮೌನೇಶ ಹುಲ್ಲೂರು, ಈರಯ್ಯಸ್ವಾಮಿ, ಚಂದಪ್ಪ, ಅಮರಪ್ಪ, ಹನುಮಂತ ಇತರರಿದ್ದರು.
- ಮಸ್ಕಿ ತಹಸಿಲ್ ಕಚೇರಿ ಮುಂದೆ ಜೋಳ ಬೆಳೆಗಾರರ ಪ್ರತಿಭಟನೆ
- ವಾರದೊಳಗೆ ಸರಿಪಡಿಸಲು ಆಗ್ರಹ
ಮಸ್ಕಿ: ಜೋಳ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ ಬಳಗಾನೂರು ಹೋಬಳಿಯ ಕೆಲ ಗ್ರಾಮಗಳ ಬೆಳೆಗಾರರ ಧಾನ್ಯ ಖರಿದಿಸುವುದಿಲ್ಲ ಎಂಬ ಅಧಿಕಾರಿಗಳ ನಡೆ ಖಂಡಿಸಿ ರೈತರು ಪಟ್ಟಣದ ತಹಸಿಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳ್ಳಿಗನೂರು, ಬುದ್ದಿನ್ನಿ, ಗೋವಿಂದ ನಾಯ್ಕ ದೊಡ್ಡಿ, ಗೌಡನಬಾವಿ ಗ್ರಾಮಗಳ ರೈತರು ಬೆಳ್ಳಿಗನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆದಿರುವ ಜೋಳ ಖರೀದಿ ಕೇಂದ್ರದಲ್ಲಿ ನೋಂದಾಯಿಸಿದ್ದಾರೆ. ಈಗ ಏಕಾಏಕಿ ನೈಜ ಬೆಳೆಗಾರರನ್ನೇ ಖರೀದಿಯಿಂದ ಕೈ ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳ್ಳಗನೂರಿನ ರೈತ ಸಿದ್ದಯ್ಯಸ್ವಾಮಿ ಮಾತನಾಡಿ, ರೈತರು ಖರೀದಿ ಕೆಂದ್ರಕ್ಕೆ ಜೋಳ ಮಾರಾಟ ಮಾಡಲು ಹೋಗಿದ್ದ ವೇಳೆ ಅಧಿಕಾರಿಗಳು 170ಕ್ಕೂ ಅಧಿಕ ರೈತರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಎಫ್‌ಐಡಿ ಮೂಲಕ ನೋಂದಣಿ ಮಾಡಿಸಿದ್ದೇವೆ. ಇದನ್ನು ಪಶೀಲಿಸದೆ ಅರ್ಹ ರೈತರ ಹೆಸರುಗಳನ್ನು ಕೈಬಿಟ್ಟಿದ್ದಾರೆ. ಕೂಡಲೇ ರೈತರ ಹೆಸರು ಸೇರ್ಪಡೆ ಮಾಡಿ, ಒಂದು ವಾರದಲ್ಲಿ ಜೋಳ ಖರೀದಿಸಬೇಕು. ಇಲ್ಲದಿದ್ದರೆ ರೈತ ಸಂಘ, ದಸಂಸ ತಾಲೂಕು ಘಟಕದ ಜತೆಗೂಡಿ ತಹಸಿಲ್ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತರಾದ ಕೆಂಚಣ್ಣ ಎರಡ್ಡಿ, ಮೌನೇಶ ಅಂಗಡಿ, ವಿರೂಪಾಕ್ಷಯ್ಯಸ್ವಾಮಿ, ರಾಜಪ್ಪ, ಶಿವಪ್ಪ ಹಣಗಿ ಇತರರಿದ್ದರು.