ಸಿಂಧನೂರಿನಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉದ್ಘಾಟಿಸಿದರು. 
ರಾಯಚೂರು

ಸಂವಿಧಾನಬದ್ಧ ಹಕ್ಕುಗಳ ಪಡೆಯಲು ಸಂಘಟಿತರಾಗಿ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸಲಹೆ
  • ಶ್ರೀ ಮಹರ್ಷಿ ಖಾಸಗಿ ನೌಕರರ ಒಕ್ಕೂಟದ ಪದಗ್ರಹಣ
ಸಿಂಧನೂರು: ಮೀಸಲಾತಿ, ಉದ್ಯೋಗ, ರಾಜಕೀಯವಾಗಿ ನಾವಷ್ಟೇ ಬೆಳೆದರೆ ಸಾಲದು. ಉನ್ನತ ಹುದ್ದೆಯಲ್ಲಿರುವವರು ಸಮಾಜವನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು. 
ನಗರದ ಟೌನ್‌ಹಾಲ್‌ನಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನಬದ್ಧವಾಗಿ ಆರ್ಥಿಕ, ಉದ್ಯೋಗ, ಸಾಮಾಜಿಕ ಸಮಾನಹಕ್ಕು ಸಿಕ್ಕಾಗ ಮಾತ್ರ ಸಮಾನತೆ ಸಿಕ್ಕಂತೆ. ಸರ್ಕಾರದ ಸೌಲಭ್ಯ ಪಡೆದು ಉನ್ನತ ಹುದ್ದೆಗೆ ಹೋಗಬೇಕು. ಅಧಿಕಾರ ಸಿಗುವವರೆಗೂ ಶೋಷಿತ ಸಮುದಾಯದ ಅಭಿವೃದ್ಧಿ ಕಷ್ಟ. ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ಅಲ್ಪತೃಪ್ತಿಗಳಾಗದೆ ಸಮಾಜದ ಬಗ್ಗೆ ಚಿಂತನೆ ಮಾಡಬೇಕು. ಬದಲಾವಣೆ ಕಂಡುಕೊಳ್ಳಬೇಕು ಎಂದ ಅವರು, ಡಾ.ಅಂಬೇಡ್ಕರ್ ಅವರು ಹುಟ್ಟದಿದ್ದರೆ ಸಂವಿಧಾನ ನಮಗೆ ಸಿಗುತ್ತಿರಲಿಲ್ಲ. ರಾಜ್ಯದಲ್ಲಿ ದೇವರಾಜ ಅರಸು ಸಿಎಂ ಆಗದಿದ್ದರೆ ಮೀಸಲಾತಿ ಅನುಕೂಲ ದೊರೆಯುತ್ತಿರಲಿಲ್ಲ ಎಂದರು.    
 ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ನಾಯಕ ಸಮಾಜದ ಭವಿಷ್ಯ ಶಿಕ್ಷಣದ ಮೇಲಿದೆ ಎಂದರು.
 ಕಾರಟಗಿಯ ಪ್ರಾಧ್ಯಾಪಕ ಡಾ.ಹನುಮಂತಪ್ಪ ಚಂದಲಪುರ, ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಮಾತನಾಡಿದರು.   ಪ್ರಸ್ತುತ ದಿನಮಾನಗಳಲ್ಲಿ ವಾಲ್ಮೀಕಿ ಜನಾಂಗದ ಸ್ಥಿತಿಗತಿ ಕುರಿತು ನಿವೃತ್ತ ಪ್ರಾಧ್ಯಾಪಕ ಡೊಣ್ಣೇಗೌಡರ ವೆಂಕಣ್ಣ ವಿಶೇಷ ಉಪನ್ಯಾಸ ನೀಡಿದರು. ಒಕ್ಕೂಟದ ಗೌರವಾಧ್ಯಕ್ಷ ತಿಮ್ಮಣ್ಣ ರಾಮತ್ನಾಳ ಅಧ್ಯಕ್ಷತೆ ವಹಿಸಿದ್ದರು. 
ಪ್ರಮುಖರಾದ ಕೆ.ಕರಿಯಪ್ಪ, ರಾಜುಗೌಡ ಬಾದರ್ಲಿ, ಚಂದ್ರಭೂಪಾಲ ನಾಡಗೌಡ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ, ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರಕುಂದಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಡಿವೈಎಸ್ಪಿ ಚಂದ್ರಶೇಖರ ನಾಯಕ, ನಾಯಕ ಸಮಾಜದ ಪ್ರಮುಖರಾದ ಅಯ್ಯನಗೌಡ ಆಯನೂರು, ಪ್ರಸನ್ನ ಪಾಟೀಲ್ ಮಸ್ಕಿ, ಹನುಮಂತಪ್ಪ ವೆಂಗಿ, ವಿರುಪಣ್ಣ ನಾಯಕ ವಕೀಲ ಇದ್ದರು.