ರಾಯಚೂರು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಹಿಡಿದು ಬೂತ್ ಮಟ್ಟದವರೆಗೆ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ದೇಶಾಧ್ಯಂತ ಸಂಘಟನಾ ಸೃಜನ್ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆಂದು ಸಂಘಟನಾ ಸೃಜನ್ ಅಭಿಯಾನದ ಎಐಸಿಸಿ ಜಿಲ್ಲಾ ಉಸ್ತುವಾರಿ ತೋಟ ಲಕ್ಷ್ಮೀಕಾಂತ ರಾವ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವೈಯಕ್ತಿಕ ಆಸಕ್ತಿ ಮತ್ತು ಮಾರ್ಗದರ್ಶನದಲ್ಲಿ ಆರಂಭಗೊಂಡಿದ್ದು, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮರುಸಂಘಟಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಜನಸೇವೆಯಲ್ಲಿ ಸಲ್ಲಿಸಿರುವ ಕೊಡುಗೆಗೆ ತಳಮಟ್ಟದ ಕಾರ್ಯಕರ್ತರ ಪರಿಶ್ರಮವೇ ಮೂಲ ಕಾರಣವಾಗಿದೆ. ಸರ್ಕಾರದಲ್ಲಿದ್ದಾಗಲೂ ಹಾಗೂ ಪ್ರತಿಪಕ್ಷದಲ್ಲಿ ದ್ದಾಗಲೂ ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ ಕಾರ್ಯಕರ್ತರೇ ಆಗಿದ್ದಾರೆ. ಆದ್ದರಿಂದ ಸಂಘಟನೆ ಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುವ ನಿಟ್ಟಿನಲ್ಲಿ ಈ ಅಭಿಯಾನ ರೂಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದೇವೆ. ಸಾಮೂಹಿಕ ಸಭೆಗಳ ಜೊತೆಗೆ ಒನ್-ಟು-ಒನ್ ಸಭೆಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಯಾವುದೇ ಕಾರ್ಯಕರ್ತರು ತಮ್ಮ ಅಭಿಪ್ರಾಯ, ಸಲಹೆ ಅಥವಾ ಅಸಮಾಧಾನವನ್ನು ಮುಕ್ತವಾಗಿ ನನ್ನೊಂದಿಗೆ ಹಂಚಿಕೊಳ್ಳಬಹುದು. ವೈಯಕ್ತಿಕ ಸಭೆಯಲ್ಲಿ ತಿಳಿಸಲಾದ ವಿಷಯಗಳನ್ನು ಸಂಪೂರ್ಣ ಗೌಪ್ಯವಾಗಿಟ್ಟುಕೊಂಡು ಯಥಾವತ್ತಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿ ವೀಕ್ಷಕ ರಾಜಶೇಖರ ಪಾಟೀಲ್ ಹುಮನಾಬದ್ ಮಾತನಾಡಿ, ಕಾಂಗ್ರೆಸ್ ಪಕ್ಷವು 140 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷವಾಗಿದ್ದು, ಇಂತಹ ದೊಡ್ಡ ಸಂಘಟನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಒಂದು ಕುಟುಂಬದಲ್ಲಿಯೇ ವಿವಿಧ ರೀತಿಯ ಅಭಿಪ್ರಾಯಗಳು ಇರುವಂತೆ, 140 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಆಂತರಿಕ ವಿಚಾರಗಳು ಇರುವುದು ಸಹಜ. ಅವುಗಳನ್ನು ಪಕ್ಷದ ಚೌಕಟ್ಟಿನಲ್ಲೇ ಸರಿಪಡಿಸಲಾಗುತ್ತದೆ.
ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಈಗ ನಡೆಯುತ್ತಿರುವ ಸಂಘಟನಾ ಸೃಜನ್ ಅಭಿಯಾನ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬೀದರ್‌ನಿಂದ ಚಾಮರಾಜನಗರದವರೆಗೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಕೇವಲ ರಾಯಚೂರಿನಲ್ಲಿ ಮಾತ್ರವಲ್ಲ, ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕರಾದ ಮನ್ಸೂಲ್ ಬಾಗ್ದಾನ್, ಜಾನ್‌ವೆಸ್ಲಿ, ಪ್ರಮುಖರಾದ ಬಸವರಾಜ ಪಾಟೀಲ್ ಇಟಗಿ, ಮಹ್ಮದ್ ಶಾಲಂ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಎನ್.ಶ್ರೀನಿವಾಸ ರೆಡ್ಡಿ ಇದ್ದರು.