ಆಲ್ಕೋಡ್ ಗ್ರಾಮದ ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.
- ಆಲ್ಕೋಡ್ ಕಸ್ತೂರಬಾ ವಸತಿ ನಿಲಯ ಬಾಲಕಿಯರ ಪ್ರತಿಭಟನೆ
- ಬಿಇಒ ರಾಧಾಬಾಯಿಗೆ ಘೇರಾವ್ ಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿನಿಯರು
ಅರಕೇರಾ: ತಾಲೂಕಿನ ಆಲ್ಕೋಡ್ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಈ ಹಿಂದೆ ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಶಿಕ್ಷಕರ ಮರುನಿಯೋಜನೆ ಆದೇಶಕ್ಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮರುನಿಯೋಜನೆಗೊಂಡ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರುಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ರಾಧಾಬಾಯಿ ಅವರು ಸೋಮವಾರ ಶಾಲೆಗೆ ಆಗಮಿಸಿದ್ದರು. ಈ ವೇಳೆ ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಶಿಕ್ಷಕರನ್ನು ಶಾಲೆಗೆ ಸೇರಿಸಿಕೊಳ್ಳಲು ಅವಕಾಶ ನೀಡದೆ ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಬಿಇಒ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಈ ಹಿಂದೆ ಶಾಲೆಯಲ್ಲಿದ್ದ ಶಿಕ್ಷಕರ ನಡುವೆ ಸಮನ್ವಯದ ಕೊರತೆ ಇತ್ತು. ಇದರಿಂದ ಶಾಲೆಯ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ಅದರ ಪರಿಣಾಮ ಮಕ್ಕಳ ಮೇಲೂ ಬೀರಿತ್ತು. ಮಧ್ಯಾಹ್ನದ ಬಿಸಿಯೂಟದಲ್ಲಿ ವಿಷ ಸೇರಿಸಿರುವ ಶಂಕೆ ಪ್ರಕರಣದ ಬಳಿಕ ಸಂಬಂಧಪಟ್ಟವರು ಅಮಾನತಾಗಿದ್ದರು. ಈಗ ಅದೇ ಶಿಕ್ಷಕರನ್ನು ಮತ್ತೆ ನಮ್ಮ ಶಾಲೆಗೆ ನಿಯೋಜಿಸಿದರೆ ಹಿಂದಿನ ಘಟನೆಗಳು ಮರುಕಳಿಸುವ ಭೀತಿ ಇದೆ. ನಮ್ಮ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಆ ಶಿಕ್ಷಕರು ಯಾವುದೇ ಕಾರಣಕ್ಕೂ ನಮಗೆ ಬೇಡ ಎಂದು ವಿದ್ಯಾರ್ಥಿನಿಯರು ಕಣ್ಣೀರಿಡುತ್ತಾ ಬಿಇಒ ಅವರಿಗೆ ಮನವಿ ಮಾಡಿದರು.
ವಿದ್ಯಾರ್ಥಿನಿಯರ ಪ್ರತಿಭಟನೆಗೆ ಪಾಲಕರು ಮತ್ತು ಗ್ರಾಮಸ್ಥರೂ ಬೆಂಬಲ ವ್ಯಕ್ತಪಡಿಸಿದರು. ಸಂಜೆ 5 ಗಂಟೆಯವರೆಗೂ ಬಿಇಒ ಅವರು ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದರೂ ಯಾವುದೇ ಫಲಿತಾಂಶ ದೊರೆಯಲಿಲ್ಲ. ಈ ಘಟನೆ ಶಾಲೆಯ ಆಡಳಿತ ಹಾಗೂ ಶಿಕ್ಷಣ ಇಲಾಖೆ ನಿರ್ಧಾರದ ಬಗ್ಗೆ ಸ್ಥಳೀಯರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ವಾತಾವರಣಕ್ಕೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
"
ಮೇಲಧಿಕಾರಿಗಳ ಆದೇಶದ ಮೇರೆಗೆ ಶಾಲೆಗೆ ಶಿಕ್ಷಕರನ್ನು ಸೇವೆಗೆ ಸೇರಿಸಲು ಭೇಟಿ ನೀಡಿದ್ದೆ. ಕೋರ್ಟ್ ಆದೇಶದ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಿಕ್ಷಕರ ಮರುನಿಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. — ರಾಧಾಬಾಯಿ ಬಿಇಒ, ದೇವದುರ್ಗ