ಹರ್ವಪೂರದಲ್ಲಿ ರಸ್ತೆ ಕಾಮಗಾರಿಗಾಗಿ ಮಣ್ಣು ಅಗೆಯುವ ವಾಹನ ಸಂಚಾರವನ್ನು ಗ್ರಾಮಸ್ಥರು ನಿಲ್ಲಿಸಿರುವುದು. 
ರಾಯಚೂರು

ರಸ್ತೆ ಕಾಮಗಾರಿಗೆ ಮಣ್ಣು ಅಗೆಯುವುದಕ್ಕೆ ವಿರೋಧ

ಪ್ರವೀಣ ಉದುಸಾ ದಲಬಂಜನ್
ಕವಿತಾಳ: ಸಮೀಪದ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಹರ್ವಪೂರ ಸರ್ಕಾರಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಮಣ್ಣು ಅಗೆಯುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಟಿಪ್ಪರ್ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಹರ್ವಪೂರ ಸೀಮಾದ ಸರ್ವೇ ನಂಬರ್ 40ರಲ್ಲಿ 59 ಎಕರೆ ಸರ್ಕಾರಿ ಭೂಮಿಯ ಮಣ್ಣು ಅಗೆದು ರಾಷ್ಟ್ರೀಯ ಹೆದ್ದಾರಿ-748 ಕಾಮಗಾರಿಗಾಗಿ ಬಳಕೆ ಮಾಡಲಾಗುತ್ತಿದೆ. ಅನಾದಿಕಾಲದಿಂದಲೂ ಇಲ್ಲಿ ಕುರಿಗಳು ದನಗಳು ಮೇಯಿಸಲಾಗುತ್ತಿದೆ. ಈಗ ರಸ್ತೆ ಕಾಮಗಾರಿಗಾಗಿ ಇಲ್ಲಿನ ಭೂಮಿಯನ್ನು ದುರ್ಬಳಕೆ ಮಾಡಿ ಇಲ್ಲಿನ ಫಲವತ್ತಾದ ಮಣ್ಣು ರಸ್ತೆಗೆ ಬಳಸಲಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸರ್ಕಾರದಿಂದ ರಸ್ತೆ ಕಾಮಗಾರಿಗಾಗಿ 10 ಎಕರೆ ಭೂಮಿಯನ್ನು ಮಂಜೂರಾಗಿದೆ ಎನ್ನುತ್ತಿದ್ದಾರೆ. ಆದರೆ 30 ಎಕರೆ ಭೂಮಿಯನ್ನು ಕಬಳಿಸಲಾಗಿದೆ. ಭೂಮಿಯ ಮಣ್ಣು ರಸ್ತೆಯ ಕಾಮಗಾರಿಗಾಗಿ ಬಿಡುವುದಿಲ್ಲವೆಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆ ಕಾಮಗಾರಿ ಮಣ್ಣಿಗಾಗಿ ಬೇರೆ ಕಡೆ ನೀಡಬೇಕು. ಇಲ್ಲಿ ನಾವು ಮಣ್ಣು ಅಗೆಯಲು ಬಿಡುವುದಿಲ್ಲ. ಆನಂದಗಲ್, ಹರ‌್ವಪೂರ, ತುಪ್ಪದೂರು ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಕಟ್ಟಡಕ್ಕೆ ಮಾತ್ರ ನೀಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹನುಮಂತ, ಗ್ರಾಮಸ್ಥರಾದ ರಾಘವೇಂದ್ರ ಗುತ್ತೆದಾರ, ಕಂಡೋಜಿರಾವ್, ಶರಣಪ್ಪಗೌಡ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ-748 ಕಾಮಗಾರಿಯ ನೋಡಲ್‌ಧಿಕಾರಿ ಭೀಮರಾವ್ ಮಾತನಾಡಿ, ಜ.17 ರಂದು ಮಸ್ಕಿ ತಹಸೀಲ್ದಾರ್‌ರಿಂದ ಮಣ್ಣಿಗಾಗಿ 20 ಎಕರೆ ಪ್ರದೇಶದ ಆದೇಶವನ್ನು ಪಡೆಯಲಾಗಿದೆ. ಇಲ್ಲಿ ಕೇಂದ್ರ ಸರ್ಕಾರದ ಅಮೃತ ಸರೋವರ ಮಿಷನ್ ಯೋಜನೆಯಡಿಯಲ್ಲಿ 20 ಎಕರೆಯಲ್ಲಿ ಕೆರೆ ನಿರ್ಮಿಸುವ ಯೋಜನೆಯಿದ್ದು ಇದಕ್ಕೆ ಸಹಕಾರ ನೀಡಬೇಕು. ಹೋರಾಟದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ತಹಸೀಲ್ದಾರ ಮಂಜುನಾಥ ಬೋಗಾವತಿ ಮಾತನಾಡಿ, ಸರ್ಕಾರದ ಆದೇಶದಂತೆ ಪರವಾನಗಿ ನೀಡಲಾಗಿದೆ. ರೈತರ ಮನವೊಲಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.