ಹಾಲಾಪುರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ರೈತ ಸಂಪರ್ಕ ಕೇಂದ್ರ. 
ರಾಯಚೂರು

ಇದ್ದೂ ಇಲ್ಲದಂತಾದ ರೈತ ಸಂಪರ್ಕ ಕೇಂದ್ರ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಹಾಲಾಪುರ ಆರ್‌ಎಸ್‌ಕೆಯಲ್ಲಿ ಸಿಬ್ಬಂದಿ ಕೊರತೆ
  • ಕವಿತಾಳ ಬಿತ್ತನೆ ಬೀಜ ಪಡೆಯಲು ಸಮಸ್ಯೆ
ಕವಿತಾಳ: ಸಮೀಪದ ಹಾಲಾಪುರ ರೈತ ಸಂಪರ್ಕ ಕೇಂದ್ರ(ಆರ್‌ಎಸ್‌ಕೆ)ದಲ್ಲಿ ಸಿಬ್ಬಂದಿ ಕೊರತೆಯಿದ್ದು, ಬಿತ್ತನೆ ಬೀಜ ಸೇರಿ ವಿವಿಧ ಸೌಲಭ್ಯ ಪಡೆಯಲು ಬರುವ ರೈತರು ಪರದಾಡುವಂತಾಗಿದೆ.
ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಅಧಿಕಾರಿ ಮಾರುತಿ ಅವರು ಪ್ರಭಾರ ಸೇವೆಯಲ್ಲಿದ್ದು, ಕಟ್ಟಡವೂ ಬಾಡಿಗೆಯದ್ದಾಗಿದೆ. ಇನ್ನು ಮಲ್ಲಟ ಕೃಷಿ ಸಂಪರ್ಕ ಕೇಂದ್ರಕ್ಕೆ ಅವರೇ ಕೃಷಿ ಅಧಿಕಾರಿ ಇರುವುದರಿಂದ ಹಾಲಾಪುರಕ್ಕೆ ಬರುವುದು ಅಪರೂಪ. ಅಲ್ಲದೆ, ಒಬ್ಬ ನೌಕರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಸಮರ್ಪಕವಾಗಿ ಸೌಕರ್ಯ ಒದಗಿಸುವುದು ಕಷ್ಟವಾಗಿದೆ.
ಮಸ್ಕಿ ನೂತನ ತಾಲೂಕು ಕೇಂದ್ರವಾದ ಬಳಿಕ ಹಾಲಾಪುರದ ರೈತ ಸಂಪರ್ಕ ಕೇಂದ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂಬ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭರವಸೆ ಹುಸಿಯಾಗಿದೆ. ಇದರಿಂದ 30ಕ್ಕೂ ಹೆಚ್ಚು ಗ್ರಾಮದ ರೈತರು ಮುಂಗಾರು ಬಿತ್ತನೆ ಬಗ್ಗೆ ಮಾಹಿತಿ ಪಡೆಯಲು ಬಂದರೆ ಸಿಬ್ಬಂದಿ ಅಭಾವದಿಂದ ಮರಳಿ ಹೋಗುವುದು ಸಾಮಾನ್ಯವಾಗಿದೆ. ಸದ್ಯ ಮುಂಗಾರು ಹಂಗಾಮು ಬೆಳೆಗೆ ರೈತರು ಬಿತ್ತನೆ ಬೀಜ ಖರೀದಿಸಲು ಮುಂದಾಗಿದ್ದಾರೆ. ಆದರೆ, ಕೇಂದ್ರದಲ್ಲಿ ಇದುವರೆಗೂ ಯಾವುದೇ ಬಿತ್ತನೆಬೀಜ ಇಲ್ಲದಿರುವುದರಿಂದ ಹಣ ಪಾವತಿಸಿ ಖಾಸಗಿಯವರ ಹತ್ತಿರ ಖರೀದಿಸಬೇಕಿದೆ. ಆದ್ದರಿಂದ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆರ್‌ಎಸ್‌ಕೆಗೆ ಅಗತ್ಯ ಸಿಬ್ಬಂದಿ, ದಾಸ್ತಾನು ಒದಗಿಸಿ ಅನುಕೂಲ ಕಲ್ಪಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
12,795 ಹೆಕ್ಟೇರ್ ಕೃಷಿ ಭೂಮಿ: ಹಾಲಾಪುರ ಹೋಬಳಿ ಕೆಂದ್ರವಾಗಿದ್ದು, ಜಂಗಮರಹಳ್ಳಿ, ಚಿಕ್ಕ ಉದ್ಬಾಳ, ನಂದಿಹಾಳ, ಯದ್ದಲದಿನ್ನಿ, ರಾಮಲದಿನ್ನಿ, ನಾಗಲದಿನ್ನಿ, ಚಿನ್ನಪುರ, ತುಗ್ಗಲದಿನ್ನಿ, ಹಂಚಿನಾಳ, ಹಿರೇಕಡಬೂರ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತವೆ. ಈ ಭಾಗದಲ್ಲಿ ನೀರಾವರಿ ಮತ್ತು ಖುಷ್ಕಿ ಪ್ರದೇಶವಿದೆ. ಒಟ್ಟು 13,795 ಹೆಕ್ಟೇರ್ ಪ್ರದೇಶದ ಪೈಕಿ 12,795 ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಸದ್ಯ ಮುಂಗಾರು ಆರಂಭದ ಹಂತದಲ್ಲಿದ್ದು, ಕೃಷಿಕರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರ ಒದಗಿಸಬೇಕಿದೆ. ಆದ್ದರಿಂದ ತ್ವರಿತವಾಗಿ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆ ನೀಗಿಸಲಿ ಎನ್ನುವುದು ಕೃಷಿಕರ ಒತ್ತಾಯವಾಗಿದೆ.
"

ಹಾಲಾಪುರ ಮತ್ತು ಮಲ್ಲಟ ರೈತ ಸಂಪರ್ಕ ಕೇಂದ್ರಗಳೆರಡನ್ನೂ ನಿಭಾಯಿಸಬೇಕು. ಮುಂಗಾರು ಹಂಗಾಮಿನ ಬಿತ್ತನೆ ಸಮಯಕ್ಕೂ ಮುಂಚೆ ಹಾಲಾಪುರಕ್ಕೆ ಬೆರೋಬ್ಬ ಅಧಿಕಾರಿಯನ್ನು ನೇಮಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇನೆ.

— ಮಾರುತಿ ಪ್ರಭಾರ ಕೃಷಿ ಅಧಿಕಾರಿ, ಹಾಲಾಪುರ