ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸತೀಶ್ ಪಾಟೀಲ್ ಉದ್ಘಾಟಿಸಿದರು. 
ರಾಯಚೂರು

ಪಠ್ಯೇತರ ಪುಸ್ತಕಗಳಿಂದ ವೈವಿಧ್ಯಮಯ ಆಲೋಚನೆ ಸಾಧ್ಯ

ಅಶೋಕ್ ಕುಮಾರ್ ಎನ್

ಸಿಂಧನೂರು: ಪ್ರಸ್ತುತ ದಿನಮಾನಗಳಲ್ಲಿ ಪುಸ ್ತಕಗಳನ್ನು ಓದುವ, ನೋಡುವ ಕ್ರಮ ಬದಲಾಗಿದ್ದು, ವ್ಯವಸ್ಥೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಬೇಕಾಗಿದೆ. ಇದು ಉತ್ತರಿಸುವ ಕಾಲವಲ್ಲ, ಪಶ್ನಿಸುವ ಕಾಲ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸತೀಶ್ ಪಾಟೀಲ್ ಹೇಳಿದರು.

ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪಠ್ಯದ ಆಚೆಗೂ ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ವೈವಿಧ್ಯಮಯ ಆಲೋಚನೆ, ಸೃಜನಾತ್ಮಕತೆ ಹಾಗೂ ವಿಮರ್ಶಾತ್ಮಕ ಚಿಂತನಾ ಕ್ರಮ ಮೈಗೂಡಿಸಿಕೊಳ್ಳಲು ಸಾಧ್ಯ. ಪ್ರೀತಿಯಿಂದ ಪುಸ್ತಕ ಓದಿದರೆ ಶಿವನನ್ನೂ ಪ್ರಶ್ನಿಸುವ ಧೈರ್ಯ, ಆತ್ಮವಿಶ್ವಾಸ ಬೆಳೆಯುತ್ತದೆ. ಸಂಕೀರ್ಣ ಪುಸ್ತಕಗಳ ಓದು ನಮ್ಮಲ್ಲಿ ವಿಚಾರಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ಅಮೃತಾ, ಶಾಂತಮ್ಮ, ಶಾಂತಾ, ಪೃಥ್ವಿರಾಜ್ ಪುಸ್ತಕಗಳ ಕುರಿತು ಅಭಿಪ್ರಾಯ ಮಂಡಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಾಜಿ ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮೀದೇವಿ, ಕನ್ನಡ ಉಪನ್ಯಾಸಕ ಮುದ್ದಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಂದ್ರಕುಮಾರ ನಹಾರ್, ಐಕ್ಯೂಎಸಿ ಸಂಚಾಲಕ ಡಾ.ವೈಜನಾಥ ಸಗರಮಠ, ಉಪನ್ಯಾಸಕರಾದ ಡಾ.ಶಂಕರ ಗುರಿಕಾರ್, ರಾಮಣ್ಣ ಹಿರೇಭೇರಿಗಿ, ಡಾ.ಅರುಣಕುಮಾರ ಭೇರಿಗಿ, ಡಾ.ಕನಕರಾಯ, ಬಸಪ್ಪ ಹುಣಸಗಿ, ಡಾ.ಹನುಮನಗೌಡ ಇದ್ದರು.