ವೀರಭದ್ರ ಸ್ವಾಮೀಜಿ  
ರಾಯಚೂರು

ಅಂಕಲಿಮಠದ ನಿರುಪಾದೇಶ್ವರ ರಥೋತ್ಸವ 10ರಂದು

ಮುದಗಲ್: ಸಮೀಪದ ಅಂಕಲಿಮಠದ ನಿರುಪಾದೀಶ್ವರ ಜಾತ್ರೆ ನಿಮಿತ್ತ ಮೇ 10ರಂದು ಮಹಾರಥೋತ್ಸವ ಜರುಗಲಿದ್ದು,  ಭಕ್ತರಿಗೆ ಮೂಲ ಸೌಕರ್ಯ ಒದಗಿಸಬೇಕಿದೆ ಎಂದು ಶ್ರೀಮಠದ ವೀರಭದ್ರ ಶ್ರೀಗಳು ಹೇಳಿದರು. 
ಅಂಕಲಿಮಠದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಾತ್ರೆಗೆ ನೆರೆಯ ಜಿಲ್ಲೆ, ತಾಲೂಕುಗಳಿಂದ ಆಗಮಿಸುವ ಭಕ್ತರಿಗೆ ಕುಡಿವ ನೀರು, ಶೌಚಗೃಹ, ತ್ಯಾಜ್ಯ ವಿಲೇವಾರಿ ಸೇರಿದಂತೆ ಸೌಲಭ್ಯ ಒದಗಿಸಲು ಸುತ್ತಲಿನ ಭಕ್ತರು ಕೈಜೋಡಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರಿಗೆ ಅಧಿಕಾರಿಗಳು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದರು. 
ಜಾತ್ರೆ ನಿಮಿತ್ತ ಮೇ 8ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಜಂಗಮ ವಟುಗಳಿಗೆ ಅಯ್ಯಚಾರ, ಮೇ 9ರಂದು ಶಿವಭಜನೆ, ರಕ್ತ ಶಿಬಿರ, ಸಂಜೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೇ 10ರಂದು ಬೆಳಗಿನ ಜಾವ ಶಿವಭಜನೆ ಸಮಾಪ್ತಿಯಾಗುವುದು. ನಂತರ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಉಚ್ಚಾಯ ಜರುಗುವುದು. 
ಮಧ್ಯಾಹ್ನ ಪೂಜೆ ನಂತರ ಮಹಾಪ್ರಸಾದ, ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಜರುಗಲಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು. ಕಿರಿಯ ಶ್ರೀಗಳಾದ ಫಕಿರೇಶ್ವರ ಸ್ವಾಮೀಜಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ನಾಗನಗೌಡ ತುರಡಗಿ, ರುದ್ರಗೌಡ ತುರಡಗಿ, ಗುರುನಗೌಡ ಅಡವಿಬಾವಿ, ರಿಯಾಜ್‌ಸಾಬ್ ಜಂಬಾಳಿ, ಹನುಮಂತ ಇತರರಿದ್ದರು.