ಹಟ್ಟಿಚಿನ್ನದಗಣಿ ಕಂಪನಿಯ ಹೊರ ನೋಟ. 
ರಾಯಚೂರು

ಕಾನೂನುಬದ್ಧ-ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಹಟ್ಟಿಚಿನ್ನದಗಣಿ ಕಂಪನಿ ಮಾಹಿತಿ
  • 1,305 ಎಕರೆ ಪ್ರದೇಶವನ್ನು ಗಣಿಗುತ್ತಿಗೆಗಾಗಿ ಮಂಜೂರು
ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಗೆ 1987ರಲ್ಲಿ 1,305 ಎಕರೆ ಪ್ರದೇಶವನ್ನು ಗಣಿಗುತ್ತಿಗೆಗಾಗಿ ಮಂಜೂರು ಮಾಡಲಾಗಿದ್ದು, ಇದುವರೆಗೆ 826 ಎಕರೆ ಜಮೀನನ್ನು ಮಾತ್ರ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ ಜಮೀನುಗಳ ಸಂಬಂಧಿಸಿದ ರೈತರ ಹೆಸರಿನಲ್ಲಿಯೇ ಇವೆ ಎಂದು ಕಂಪನಿ ತಿಳಿಸಿದೆ.
ಕೆಲವು ರೈತರು ತಮ್ಮ ಇಸಿಯಲ್ಲಿ ಕಂಪನಿಯ ಹೆಸರು ನಮೂದಾಗಿರುವುದರಿಂದ ಕೃಷಿ ಸಾಲ ಹಾಗೂ ಜಮೀನು ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು. ಈ ಕುರಿತು ಲಿಂಗಸುಗೂರು ಉಪನೋಂದಣಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇಸಿಯಲ್ಲಿ ಗಣಿಗುತ್ತಿಗೆ ನಮೂದು ಇರುವುದರಿಂದ ಮಾತ್ರ ಸಾಲ ಅಥವಾ ಜಮೀನು ಮಾರಾಟಕ್ಕೆ ಯಾವುದೇ ಕಾನೂನುಬದ್ಧ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಸಿಯಿಂದ ಕಂಪನಿಯ ಹೆಸರನ್ನು ತೆಗೆದುಹಾಕುವ ಕುರಿತು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆದಿದೆ.
ಉಳಿದಿರುವ ಜಮೀನುಗಳನ್ನು ಭವಿಷ್ಯದಲ್ಲಿ ಭೂಸ್ವಾಧೀನಪಡಿಸಿಕೊಳ್ಳಬೇಕೇ ಅಥವಾ ಕೈಬಿಡಬೇಕೇ ಎಂಬ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಭಾರತ ಸರ್ಕಾರದ ಎಂಇಸಿಎಲ್ ಸಂಸ್ಥೆಗೆ ಪರಿಶೋಧನಾ ಕಾರ್ಯ ವಹಿಸಲಾಗಿದೆ. ಪ್ರಾಥಮಿಕ ಸಮೀಕ್ಷೆ ಹಾಗೂ ಕೆಲವು ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ಪೂರ್ಣಗೊಂಡಿದ್ದು, ಅಂತಿಮ ವರದಿಗೆ 3 ತಿಂಗಳ ಕಾಲಾವಕಾಶ ಅಗತ್ಯ ಎಂದು ರೈತರಿಗೆ ತಿಳಿಸಲಾಗಿದೆ.
ಜು.27ರಂದು ನಡೆದ ಪ್ರತಿಭಟನೆ ವೇಳೆ ವ್ಯಕ್ತವಾದ ಸಂದೇಹಗಳಿಗೆ ಸ್ಪಷ್ಟನೆ ನೀಡಿರುವ ಕಂಪನಿ, ತನ್ನ ಎಲ್ಲ ಗಣಿಗಾರಿಕೆ ಚಟುವಟಿಕೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾನೂನು, ನಿಯಮಗಳ ಪ್ರಕಾರ ನಡೆಯುತ್ತಿವೆ ಎಂದು ತಿಳಿಸಿದೆ. ರೈತರ ಹಿತಾಸಕ್ತಿಯನ್ನು ಗೌರವಿಸುವ ಕಂಪನಿ, ವೈಜ್ಞಾನಿಕ ವರದಿ ಹಾಗೂ ಸರ್ಕಾರದ ನಿಯಮಗಳನ್ನು ಆಧರಿಸಿ ಸಮಸ್ಯೆಗೆ ಕಾನೂನುಬದ್ಧ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಭಾರ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.