ರಾಯಚೂರಿನ ಜಲ ನಿರ್ಮಲ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಚೇಗೆ ರಾಷ್ಟ್ರೀಯ ಮತದಾರ ದಿನಾಚರಣೆಯ ನಿಮಿತ್ತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮಕ್ಕೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಚಾಲನೆ ನೀಡಿದರು. ಡಿಡಿಪಿಐ ಡಾ.ಕೆ.ಡಿ. ಬಡಿಗೇರ, ಪದವಿ ಪೂರ್ವ ಶಿಕ್ಷಣ ವಿಭಾಗದ ಮಂಜುನಾಥ್, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚನ್ನಬಸವ, ಡಾ.ಶಂಕರಆನಾಂದ ಜಿ. ಇದ್ದರು. 
ರಾಯಚೂರು

ರಾಷ್ಟ್ರೀಯ ಮತದಾರ ದಿನಾಚರಣೆ

ರಾಚಯ್ಯ ಸ್ವಾಮಿ
ರಾಯಚೂರು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿಶ್ವದಲ್ಲಿಯೇ ಭಾರತದ ಸಂವಿಧಾನವು ಲಿಖಿತ ಸಂವಿಧಾನವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ನಮಗೆ ಬೇಕಾಗಿರುವಂತ ಜನನಾಯಕನನ್ನು ಆಯ್ಕೆ ಮಾಡುವಂತಹ ಅಧಿಕಾರವು ಮತದಾರರಿಗೆ ಸಂವಿಧಾನಬದ್ಧವಾಗಿ ಬಂದಿದೆಂದು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು.
ನಗರದ ಜಲ ನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಚೇಗೆ ರಾಷ್ಟ್ರೀಯ ಮತದಾರ ದಿನಾಚರಣೆಯ ನಿಮಿತ್ತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಮಹತ್ವದ ಮತದಾನದ ಅವಕಾಶವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಮಾನವಾಗಿ ಸಿಕ್ಕಿರುವುದು ಒಂದು ಸುವರ್ಣ ಅವಕಾಶ. ರಾಷ್ಟ್ರ ಮತ್ತು ರಾಜ್ಯ ಚುನಾವಣಾ ಆಯೋಗವು ಇಂತಹ ಪ್ರಬಂಧ ಸ್ಪರ್ಧೆಯನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ಮತ್ತು ಮತದಾನದ ಅರಿವು ಮೂಡಿಸುವಂತಹ ಕೆಲಸವನ್ನು ಮಾಡುತ್ತಿದೆ.

ಚುನಾವಣೆ ಮತ್ತು ಮತದಾನ ಸಂದರ್ಭದಲ್ಲಿ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು ಅವುಗಳ ಕುರಿತು ಅರಿವನ್ನು ಮೂಡಿಸುವಂತಹ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಇಂಥ ಸ್ಪರ್ಧೆಗಳು ವಿದ್ಯಾರ್ಥಿಗಳ ಚುನಾವಣೆ ಮತ್ತು ಮತದಾನದ ಬಗ್ಗೆ ತಿಳಿದುಕೊಳ್ಳಲು ಅವಶ್ಯಕವಾಗಿವೆಂದು ತಿಳಿಸಿದರು.
ಡಿಡಿಪಿಐ ಡಾ.ಕೆ.ಡಿ. ಬಡಿಗೇರ ಮಾತನಾಡಿ, ನಮ್ಮ ಮತದಾನ ವ್ಯವಸ್ಥೆಯು ಪ್ರಜಾಪ್ರಭುತ್ವದ ತಳಹದಿಯಾಗಿದೆ.
ಈ ಪ್ರಬಂಧ ಸ್ಪರ್ಧೆಯನ್ನು ರಾಯಚೂರ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಿ ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ಯಶಗೊಳಿಸಲು ಶ್ರಮಿಸಿರುವುದು ಅಭಿನಂದನಾರ್ಹ ಸಂಗತಿ ಎಂದರು.

ನಂತರ ಪ್ರಜಾಪ್ರಭುತ್ವದಲ್ಲಿ ಮತದಾನ ಮತ್ತು ಚುನಾವಣೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧದ ವಿಷಯ ನೀಡಲಾಯಿತು. ಪ್ರೌಢಶಾಲೆ ವಿಭಾಗ, ಪದವಿ ಪೂರ್ವ ಕಾಲೇಜು ವಿಭಾಗ ಮತ್ತು ಪದವಿ ಮತ್ತು ವಿಶ್ವವಿದ್ಯಾಲಯಗಳ ವಿಭಾಗವಾರು ಪ್ರತ್ಯೇಕ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪ್ರಬಂಧ ಬರೆದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ವಿಭಾಗದ ಮಂಜುನಾಥ್, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚನ್ನಬಸವ, ಡಾ.ಶಂಕರಆನಾಂದ ಜಿ. ಇದ್ದರು.