ರಾಯಚೂರಿನ ಕೆಇಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತದಿಂದ ವತಿಯಿಂದ ಭಾನುವಾರ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್., ಮಗುವಿಗೆ ಪೋಲಿಯೋಹಾಕುವುದರ ಮೂಲಕ ಚಾಲನೆ ನೀಡಿದರು. ಕಲಬುರಗಿ ವಿಭಾಗದ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ.ಎ.ಎಸ್ ರುದ್ರವಾಡಿ, ಡಿಎಚ್‌ಓ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ, ತಹಶಿಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಮಲ್ಲಿಕಾರ್ಜುನ, ಟಿಎಚ್‌ಓ ಡಾ.ಅಮೃತ್ ಹುಕ್ಕೇರಿ ಇದ್ದರು.
- ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರು ಶ್ರಮಿಸಿ- ಡಿಸಿ
ರಾಯಚೂರು
ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿಯನ್ನು ತಪ್ಪದೇ ಹಾಕಿಸಬೇಕೆಂದು ಜಿಲ್ಲಾದಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಕೆ.ಇ.ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಿಮ್ಸ್ ಅಸ್ಪತ್ರೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಮಗುವಿಗೆ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಕಾರ್ಯಕರ್ತರು, ಪೋಷಕರು ಯಾವ ಮಗುವು ಹನಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಆ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರು ಶ್ರಮಿಸಬೇಕು. ಭಾರತ ಸರಕಾರವು 1995 ರಿಂದ ಪಲ್ಸ್ ಪೋಲಿಯೊ ಅಭಿಯಾನದ ಮೂಲಕ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಪೋಲಿಯೋ ಮೈಲಿಟಿಸ್ ವೈರಸ್ ನಿಯಂತ್ರಣಕ್ಕಾಗಿ ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳುತ್ತಾ ಬರಲಾಗಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿಂದು ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಲಾಗುತ್ತಿದ್ದು, ನಾವೆಲ್ಲರೂ ಪೋಲಿಯೊ ವೈರಸ್ ವಿರುದ್ದದ ವಿಜಯವನ್ನು ಮುಂದುವರೆಸಲು ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು ಎಂದರು.
ಶಾಶ್ವತ ಅಂಗವಿಕತೆಯುಂಟು ಮಾಡುವ ಪೋಲಿಯೊ ವೈರಸ್‌ನ್ನು 2011ರಲ್ಲಿಯೇ ನಮ್ಮ ದೇಶದಲ್ಲಿ ನಿರ್ಮೂಲನೆ ಮಾಡಲಾಗಿದ್ದು, ದೇಶದ ನೆರೆಯ ರಾಷ್ಟ್ರಗಳಲ್ಲಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಜರಗುತ್ತಿದ್ದು, ಇದಕ್ಕಾಗಿ ಜಿಲ್ಲಾಧ್ಯಂತ ಹುಟ್ಟಿನಿಂದ 5 ವರ್ಷದೊಳಗಿನ ಒಟ್ಟು 2,60,002 ಮಕ್ಕಳಿಗೆ ಲಸಿಕೆ ಹಾಕುವ ಗುರಿಯೊಂದಿಗೆ 3,29,000 ಡೋಸ್ ಲಸಿಕೆ ಸಿದ್ದವಾಗಿಟ್ಟುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 450,732 ಮನೆಗಳ ಬೇಟಿಯ ಗುರಿ ಇದ್ದು, ಇದಕ್ಕಾಗಿ 1,176 ಮನೆ ಭೇಟಿ ತಂಡಗಳು, 52 ಟ್ರಾನ್ಸಿಟ್ ತಂಡಗಳು ಹಾಗೂ 32 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 1260 ತಂಡಗಳನ್ನು ನಿಯೋಜಿಸಲಾಗಿದೆ. ಇದಕ್ಕಾಗಿಒಟ್ಟು 2530 ಲಸಿಕಾ ಕಾರ್ಯಕರ್ತರು, 248 ಮೇಲ್ವಿಚಾರಕರು ಮತ್ತು 05 ತಾಲ್ಲೂಕುಗಳಿಗೆ ಉಸ್ತುವಾರಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 827 ಕ್ಲಿಷ್ಟಕರ ಸ್ಥಳಗಳನ್ನು ಗುರುತಿಸಲಾಗಿದ್ದು, ಮನೆ ಬೇಟಿಯೊಂದಿಗೆ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಸಂತೆ ಹಾಗೂ ಮಾರುಕಟ್ಟೆಗಳಲ್ಲಿ ನಿರಂತರವಾಗಿ ಲಸಿಕೆ ಹಾಕಲು ಇಲಾಖೆಯ ಸಿಬ್ಬಂದಿ ಹಾಗೂ ರಿಮ್ಸ್, ಎಸ್‌ಕೆಇ ಹಾಗೂ ನಂದನಿ ನರ್ಸಿಂಗ್ ಕಾಲೇಜು, ನವೋದಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಸ್ಥಳಿಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅಗತ್ಯವಿರುವಕಡೆ ಅಂಗನವಾಡಿ ಕಾರ್ಯಕರ್ತೆಯರು ಲಸಿಕಾ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.
ನಗರ ಪ್ರದೇಶಗಳ ಬೂತ್ ಗುರ್ತಿಸಲು ಕ್ಯೂ ಆರ್ ಕೋಡ್‌ನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗದ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ.ಎ.ಎಸ್ ರುದ್ರವಾಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ, ತಹಶಿಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಮಲ್ಲಿಕಾರ್ಜುನ, ಟಿಎಚ್‌ಓ ಡಾ.ಅಮೃತ್ ಹುಕ್ಕೇರಿ, ವೈದ್ಯಾಧಿಕಾರಿ ಡಾ. ಇಸ್ಫಾಕ್ ಅಹಮ್ಮದ್, ಇಸಿಓ ರಾಘವೇಂದ್ರ, ರೋಟರಿ ಸಂಸ್ಥೆಯ ತ್ರಿವಿಕ್ರಮ್ ಜೋಶಿ, ಪವನ್ ಕಿಶೋರ್ ಪಾಟೀಲ್, ಕೆ ಲಕ್ಷ್ಮಿಕಾಂತ ರೆಡ್ಡಿ, ಮಾನವ ಹಕ್ಕು ಸಂಘಟನೆಯ ಚಂದ್ರಶೇಖರ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸೇರಿ ಅನೇಕರು ಇದ್ದರು.