ಹತ್ತಿ ಖರೀದಿಗೆ ಹೆಸರು ನೋಂದಣಿ ಅವಧಿ ವಿಸ್ತರಣೆ ಮಾಡಿ ದೇವದುರ್ಗದ ಎಪಿಎಂಸಿ ಕಚೇರಿ ಮುಂದೆ ನಾಮಫಲಕ ಹಾಕಿರುವುದು. 
ರಾಯಚೂರು

ಹೆಸರು ನೋಂದಣಿ ಅವಧಿ ವಿಸ್ತರಣೆ

ಪ್ರಮುಖ ಮುಖ್ಯಾಂಶಗಳು

  • ನೋಂದಣಿ
  • ಅವಧಿ ವಿಸ್ತರಣೆ
  • ಜಿಲ್ಲಾಧಿಕಾರಿ ನಿತೀಶ ಕೆ. ಆದೇಶ

ಹೆಸರು ನೋಂದಣಿ ಅವಧಿ ವಿಸ್ತರಣೆ

ದೇವದುರ್ಗ: ಸರ್ಕಾರದ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಭಾರತೀಯ ಹತ್ತಿ ನಿಗಮದಿಂದ ಹತ್ತಿ ಖರೀದಿಗೆ ಹೆಸರು ನೋಂದಣಿ ಅವಧಿ ವಿಸ್ತರಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಡಿ.31ರವರೆಗೆ ಅವಧಿ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ನಿತೀಶ ಕೆ. ಆದೇಶ ಹೊರಡಿಸಿದ್ದಾರೆ.
ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಡಿ ಹತ್ತಿ ಮಾರಾಟಕ್ಕೆ ರೈತರ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಸೆ.1ರಿಂದ ಹೆಸರು ನೋಂದಣಿ ಆರಂಭವಾಗಿತ್ತು. ಕೊನೇ ದಿನ ಅ.31 ಕಳೆದರೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಿರಲಿಲ್ಲ. ಆದ್ದರಿಂದ ಶೇ.80 ರೈತರು ಹೆಸರು ನೋಂದಣಿ ಮಾಡಿರಲಿಲ್ಲ. ಈ ಕುರಿತು ಅ.31ರಂದು ವಿಜಯವಾಣಿ ‘ಎಪಿಎಂಸಿಗೆ ಆಟ ರೈತರಿಗೆ ಸಂಕಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಎಪಿಎಂಸಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಆದ್ದರಿಂದ ನೋಂದಣಿ ಅವಧಿಯನ್ನು ಡಿ.31ರವರೆಗೆ ವಿಸ್ತರಣೆ ಮಾಡಿದ್ದು, ಈಗಾಗಲೇ ನೋಂದಣಿ ಮಾಡಿಸಿದ ರೈತರ ಹತ್ತಿ ಖರೀದಿಗೆ ಕ್ರಮವಹಿಸಲಾಗಿದೆ. ವೈಎಸ್‌ಎಸ್ ಜಿನ್ನಿಂಗ್, ಜೆವಿಆರ್ ಕಾಟನ್ ಮಿಲ್, ಎಂಎಜಿ ಜಿನ್ನಿಂಗ್, ಸಂದೀಪ್ ಕಾಟನ್ ಮಿಲ್‌ನಲ್ಲಿ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿದೆ.
ಸದ್ಯ ಎರಡು ಸಾವಿರ ರೈತರು ಹೆಸರು ನೋಂದಣಿ ಮಾಡಿದ್ದು, 400 ಹೆಸರಿಗೆ ಅನುಮತಿ ದೊರೆತಿದೆ. ಪ್ರತಿ ರೈತರಿಂದ ಎಕರೆಗೆ 9 ಕ್ವಿಂಟಾಲ್ ಹತ್ತಿ ಖರೀದಿಗೆ ಅವಕಾಶ ನೀಡಲಾಗಿದೆ. ಪ್ರತಿ ಕ್ವಿಂಟಾಲ್‌ಗೆ 7110 ರೂ.ನಿಂದ 8110ರೂ. ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಇದರಿಂದ ತಾಲೂಕಿನ ರೈತರು ನಿರಾಳರಾಗಿದ್ದಾರೆ.