ಮುದಗಲ್ ಐತಿಹಾಸಿಕ ಹುಸೇನಿ ಆಲಂ ದರ್ಗಾದಲ್ಲಿ ಗುರುವಾರ ಕಂಡುಬಂದ ಭಕ್ತಸಾಗರ.
- ಕಿಲ್ಲಾ-ಮೇಗಳಪೇಟೆ ದರ್ಗಾಕ್ಕೆ ಹರಿದು ಬಂದ ಭಕ್ತಸಾಗರ
- ಕಣ್ಮನ ಸೆಳೆದ ಹುಲಿ ವೇಷಧಾರಿಗಳ ಕುಣಿತ
ಮುದಗಲ್: ಐತಿಹಾಸಿಕ ಮುದಗಲ್ ಮೊಹರಂ ಹಬ್ಬದ ನಿಮಿತ್ತ 9ನೇ ದಿನವಾದ ಗುರುವಾರ ಕಿಲ್ಲಾದ ಹುಸೇನಿ ಆಲಂ ಮತ್ತು ಮೇಗಳಪೇಟೆಯ ಹಸನ್ ಆಲಂ ದರ್ಗಾಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು.
ಕಿಲ್ಲಾದ ಹುಸೇನಿ ಆಲಂ ದರ್ಗಾದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಕೆಂಪು ಸಕ್ಕರೆ, ಬೆಳ್ಳಿ ಮೂರ್ತಿಗಳನ್ನು ಮುಡುಪು ಸಮರ್ಪಣೆ ಮಾಡಿದರು. ಇನ್ನೂ ಕೆಲವರು ದೀರ್ಘದಂಡ ನಮಸ್ಕಾರ ಮತ್ತು ಆಲಂಗಳಿಗೆ ಮಾದಲಿ, ಚೊಂಗೆದಂತಹ ಸಿಹಿ ಪದಾರ್ಥಗಳನ್ನು ನೈವೇದ್ಯ ಸಲ್ಲಿಸಿದರು.
ಕೆಲ ಭಕ್ತರು ಬಂಗಾರ, ಬೆಳ್ಳಿಯ ಆಭರಣಗಳನ್ನು ಆಡಳಿತ ಮಂಡಳಿ ಮೂಲಕ ದರ್ಗಾದಲ್ಲಿ ಪ್ರತಿಷ್ಠಾಪಿಸಲಾದ ಆಲಂಗಳ ಉಸ್ತುವಾರಿ ಸಮಿತಿ ಪದಾಧಿಕಾರಿಗಳಿಗೆ ಸಮರ್ಪಿಸಿದರು. ಕಿಲ್ಲಾದ ಹುಸೇನಿ ಆಲಂ ದರ್ಗಾದ ಮುಂದೆ ಭಕ್ತರು ಬೇಡಿಕೆ ಇಷ್ಟಾರ್ಥಿಗಾಗಿ ಹುಲಿ ವೇಷತೊಟ್ಟು ಕುಣಿತ, ಹೆಜ್ಜೆ ಕುಣಿದಾಡಿದರು. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಆಲಂಗಳ ದರ್ಶನ ಪಡೆದರು. ಪ್ರಮುಖರಾದ ಮಾಸೂಮ್ ಷರೀಫ್, ನ್ಯಾಮತ್ ಖಾದ್ರಿ, ಗಯಾಸುದ್ದೀನ್ ಇತರರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮೌಲಾಲಿ ಆಲಂ ಸವಾರಿ: ಬುಧವಾರ ರಾತ್ರಿಯಿಡಿ ಮೌಲಾಲಿ ಆಲಂ ಸವಾರಿ ಜರುಗಿತು. ಬೇಗಂಪುರ ಪೇಟೆಯ ದರ್ಗಾದಲ್ಲಿ ಪ್ರತಿಷ್ಠಾಪಿಸಲಾದ ಮೌಲಾಲಿ ಆಲಂಗಳಿಗೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನೈವೇದ್ಯ ಸಮರ್ಪಣೆ ಮಾಡಿ ಪ್ರಾರ್ಥಿಸಿದರು. ರಾತ್ರಿಯಿಡೀ ಭಕ್ತರಿಂದ ಮೊಹರಂ ಹಾಡು, ರಿವಾಯತು ಪದಗಳನ್ನು ಹಾಡುವುದರ ಜತೆಗೆ ಹೆಜ್ಜೆ ಕುಣಿತ ಭಕ್ತರ ಗಮನ ಸೆಳೆಯಿತು.