- ತಾಲೂಕು ಹೋರಾಟ ಸಮಿತಿ ಪ್ರಮುಖ ಶರಣಪ್ಪ ಕಟ್ಟಿಮನಿ ಮಾಹಿತಿ
ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಮತ್ತು ಮಾನದಂಡಗಳನ್ನು ಹೊಂದಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಫೆ.18ರಂದು ಮುದಗಲ್ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಪ್ರಮುಖ ಶರಣಪ್ಪ ಕಟ್ಟಿಮನಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷದ ರಾಜ್ಯ ನಾಯಕರುಗಳು ಅಧಿಕಾರಕ್ಕಾಗಿ ಮುದಗಲ್ ತಾಲೂಕು ಕೇಂದ್ರದ ಘೋಷಣೆ, ಕೋಟೆ ಉತ್ಸವ, ಸಮರ್ಪಕ ಕುಡಿವ ನೀರಿನ ಯೋಜನೆ ಅನುಷ್ಠಾನಗಳಿಸುವ ಭರವಸೆ ನೀಡಿದ್ದರು. ಚುಕ್ಕಾಣಿ ಹಿಡಿದ ನಂತರ ಎಲ್ಲ ಮರೆತಿದ್ದಾರೆ.
ಫೆ.18ರಂದು ನಡೆಯುವ ಮುದಗಲ್ ಬಂದ್ ಗೆ ಪ್ರಗತಿಪರ, ಕನ್ನಡಪರ, ರೈತಪರ, ದಲಿತಪರ ಸೇರಿದಂತೆ 19ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಲಿವೆ. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ನೀಡಲಿದ್ದಾರೆ ಎಂದರು.
ಹೋರಾಟಕ್ಕೆ ಬೆಂಬಲಿಸುವಂತೆ ಹಾಲಿ ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಸೇರಿದಂತೆ ಪಟ್ಟಣದ ಹಿರಿಯರನ್ನೂ ಆಹ್ವಾನಿಸಲಾಗಿದೆ. ಕೆಲ ಮಠಾಧೀಶರು ಆಗಮಿಸಲಿದ್ದಾರೆ ಎಂದರು.
ಕರವೇ ಘಟಕಾಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿದರು. ಮುಖಂಡರಾದ ಮಂಜೂರ್ ಮಿಯಾ ಮುಜಾವರ್, ರಘುವೀರ ಮೇಗಳಮನಿ, ರಹೀಂ ಶಾ ಮಕಾಂದಾರ, ಮಂಜುನಾಥ ಬನ್ನಿಗೋಳಕರ, ಬಸವರಾಜ ಬಂಕದಮನಿ, ಸಂಜಯ್ ಚೆಲುವಾದಿ, ಹನುಮಂತ ಬಡಿಗೇರ್, ರಮೇಶ ಕಂದಗಲ್, ಸಾಬು ಹುಸೇನ್, ಮಹಾಂತೇಶ ಚಟ್ಟೇರ್ ಇತರರಿದ್ದರು.