ರಾಯಚೂರಿನ ಪೆಟ್ರೋಲ್ ಬಂಕ್‌ನಲ್ಲಿ ವಾಹನ ಚಾಲಕರು ಪೆಟ್ರೋಲ್‌ಗಾಗಿ ಸಾಲಿನಲ್ಲಿ ನಿಂತಿರುವುದು. 
ರಾಯಚೂರು

ಪೆಟ್ರೋಲ್‌ಗಾಗಿ ಮುಗೆಬಿದ್ದ ವಾಹನ ಸವಾರರು

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಹಲವು ಬಂಕ್‌ಗಳು ಬಂದ್
  • -ಪೆಟ್ರೋಲ್‌ಗಾಗಿ ಮುಗೆಬಿದ್ದ ವಾಹನ ಸವಾರರು
  • ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ
ರಾಯಚೂರು ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದೆಂದು ವದಂತಿಗಳು ಹರಿದಾಡುತ್ತಿದ್ದು, ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುವುದರ ಜತೆಗೆ ನಗರದ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಇಲ್ಲದೆ ಬಂದ್ ಆಗಿವೆ.
ನಗರ ಸೇರಿದಂತೆ ಜಿಲ್ಲಾಧ್ಯಂತ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್, ಡಿಸೇಲ್ ಪಡೆಯಲು ಮುಗಿಬಿದ್ದಿರುವುದು ಕಂಡುಬಂದಿದೆ. ಕೆಲವರು ಬ್ಯಾರೆಲ್ ಮತ್ತು ಕ್ಯಾನ್‌ಗಳಲ್ಲಿ ಪೆಟ್ರೋಲ್ ಸಂಗ್ರಹಿಸಲು ಮುಂದಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ನಗರದಲ್ಲಿನ ಕೆಲವು ಬಂಕ್‌ಗಳು ಮುಂಗಡ ಹಣ ಪಾವತಿ ಸಮಸ್ಯೆಯಿಂದ ತಾತ್ಕಾಲಿಕವಾಗಿ ಬಂದ್ ಮಾಡಿದ್ದರಿಂದ ಜನರು ತಪ್ಪಾಗಿ ಅರ್ಥೈಸಿಕೊಂಡು ಪೆಟ್ರೋಲ್, ಡೀಸೆಲ್ ಸಂಪೂರ್ಣ ಖಾಲಿಯಾಗಿದೆ ಎಂಬ ವದಂತಿ ಹಬ್ಬಿಸಿದ್ದಾರೆ.
ಈ ಪರಿಸ್ಥಿತಿಯನ್ನು ಗಮನಿಸಿದ ಪೊಲೀಸರು, ವಾಹನಗಳಿಗೆ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಬೇಕು, ಬ್ಯಾರೆಲ್ ಹಾಗೂ ಕ್ಯಾನ್‌ಗಳಲ್ಲಿ ತುಂಬಿಸಬಾರದು ಎಂದು ಸೂಚನೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಹಾಗೂ ಈಗಿರುವ ಬೆಲೆಯ ಜೊತೆಗೆ 50 ರೂ. ಮತ್ತಷ್ಟು ಏರಲಿದೆ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಸರ್ಕಾರ ಮತ್ತು ಇಂಧನ ಇಲಾಖೆ ಈ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಇಂಧನದ ಯಾವುದೇ ಕೊರತೆ ಇಲ್ಲ ಮತ್ತು ಪೂರೈಕೆ ಸಮರ್ಪಕವಾಗಿದೆ ಎಂದು ತಿಳಿಸಿದ್ದಾರೆ.