ಗುರುಗುಂಟಾದ ಹೊರಪೇಟೆ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಸಂತೆಕಲ್ಲೂರಿನ ಮಹಾಂತ ಶ್ರೀಗಳು ಮಾತನಾಡಿದರು. ರಾಜಾ ಸೋಮನಾಥ ನಾಯಕ, ರಾಜಾ ನರಸಿಂಹ ನಾಯಕ ವೆಂಕಟೇಶ ಗುತ್ತೇದಾರ್, ಗೋವಿಂದ ನಾಯಕ, ನಂದೀಶನಾಯಕ ಇತರರಿದ್ದರು. 
ರಾಯಚೂರು

ಮಠಗಳು ಸಂಸ್ಕಾರ ಬೆಳೆಸುವ ಕೇಂದ್ರಗಳು

ಗುರುಗುಂಟಾ: ಮಠಗಳು ಚದುರಿದ ಮನಸ್ಸುಗಳನ್ನು ಒಟ್ಟುಗೂಡಿಸುತ್ತವೆ. ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸಿ, ಅಧ್ಯಾತ್ಮದ ಹಸಿವನ್ನು ನೀಗಿಸುವ ಮೂಲಕ ಸರ್ವಧರ್ಮಗಳ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂತೆಕಲ್ಲೂರಿನ ಮಹಾಂತ ಶ್ರೀಗಳು ಹೇಳಿದರು.
ಸ್ಥಳೀಯ ಹೊರಪೇಟೆ ಮಠದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಿಂ.ಶ್ರೀ ಕಪ್ಪರದ ಅಯ್ಯಪ್ಪ ತಾತನ ಏಳನೇ ವರ್ಷದ ಬೆಳ್ಳಿ ರಥೋತ್ಸವ ಧರ್ಮಸಭೆಯ ಉದ್ಘಾಟಿಸಿ ಮಾತನಾಡಿದರು. ಲಿಂ.ಕಾಲಜ್ಞಾನಿ ಅಯ್ಯಪ್ಪ ತಾತ ಸರ್ವ ಸಮುದಾಯದ ಜನರಲ್ಲಿ ಉತ್ತಮ ಜ್ಞಾನ ಉಣಬಡಿಸಿ, ಪರಸ್ಪರ ಬಾಂಧವ್ಯದ ಕೊಂಡಿಯಾಗಿ ಅವರ ಆಶೋತ್ತರಗಳಿಗೆ ಸ್ಪಂದಿಸಿದ್ದರಿಂದ ಮಠ ಪ್ರಗತಿ ಕಂಡಿದೆ. ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ವರ್ಷದಿಂದ ವರ್ಷಕ್ಕೆ ತೆರೆದುಕೊಳ್ಳುತ್ತಿವೆ. ಭಕ್ತರು ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ಅವರ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. 
ಸಂಸ್ಥಾನಿಕ ರಾಜಾ ಸೋಮನಾಥ ನಾಯಕ, ಮಠದ ಪ್ರಮುಖ ಚನ್ನಯ್ಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ, ಲಿಂಗಸಗೂರು ತಾಲೂಕು ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೀಶ ನಾಯಕ, ಆರ್ಯವೈಶ್ಯ ಮಹಾಸಭಾ ರಾಜ್ಯ ಉಪಾಧ್ಯಕ್ಷ ಆನಂದ ತುರ್ವಿಹಾಳ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ರಾಜಾನರಸಿಂಹನಾಯಕ, ಲಿಂಗಸುಗೂರು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೇದಾರ್ ಇತರರಿದ್ದರು. ಇದೇ ವೇಳೆ ಮಠದ ಲಕ್ಷ್ಮೀ ಹಾಗೂ ವಿವಿಧ ಕ್ಷೇತ್ರದ ಸಾಧಕರು, ವಿವಿಧ ಭಜನಾ ತಂಡಗಳ ಪ್ರಮುಖರನ್ನು ಸನ್ಮಾನಿಸಲಾಯಿತು.