ಜಿಲ್ಲೆಯ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜಿಲ್ಲಾ ವೀರಶೈವ ಸಮಾಜದಿಂದ ಸೋಮವಾರ ರಾಯಚೂರಿನ ಬಸವೇಶರ‌್ವ ಕಾಲೋನಿಯಲ್ಲಿ ಸಭೆ ನಡೆಸಲಾಯಿತು. ಕರೆಗುಡ್ಡ ಮಹಾಂತಮಠದ ಘನವಂತಶ್ರೀ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶರಣಭೂಪಾಲ ನಾಡಗೌಡ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು,ವೀರಶೈವ ರುದ್ರಸೇನೆ ಅಧ್ಯಕ್ಷ ಅಮರೇಶ ಶಿವನಾಗಪ್ಪ , ಶರಣಪ್ಪಗೌಡ ಜಾಡಲದಿನ್ನಿ, ಹರವಿ ನಾಗನಗೌಡ, ಶರಣಮ್ಮ ಕಾಮರೆಡ್ಡಿ ,ರಾಮನಗೌಡ ಏಗನೂರು, ವೀರುಪಾಕ್ಷಪ್ಪ ಗೌಡ, ಬಾಬುಗೌಡ ಇದ್ದರು. 
ರಾಯಚೂರು

ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಸಮಾಜದಿಂದ ಪ್ರತಿಭಟನೆ
  • ಕಾರ್ಯಕರ್ತರಿಂದ ಆತ್ಮಹತ್ಯೆಗೆ ಯತ್ನ

ರಾಯಚೂರು

ಜಿಲ್ಲೆಯ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜಿಲ್ಲಾ ವೀರಶೈವ ಸಮಾಜದಿಂದ ಸೋಮವಾರ ನಗರದ ಬಸವೇಶರ‌್ವ ಕಾಲೋನಿಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಕರೆಗುಡ್ಡ ಮಹಾಂತಮಠದ ಘನವಂತಶ್ರೀ ಮಾತನಾಡಿ, ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಬಹುದೊಡ್ಡ ಅನ್ಯಾಯವಾಗಿದ್ದು, ನ್ಯಾಯ ಪಡೆದುಕೊಳ್ಳಲು ಎಲ್ಲ ಸಮಾಜದವರು ಒಗ್ಗೂಡಿ ಹೋರಾಟ ಮಾಡಬೇಕಿದೆ. ಜಿಲ್ಲೆಯ ಅಭಿವೃದ್ಧಿಗೆ ಸಚಿವ ಸ್ಥಾನ ಅತ್ಯಂತ ಮುಖ್ಯವಾಗಿದೆ. ಆದರೆ ರಾಜ್ಯ ಸರ್ಕಾರವು ಜಿಲ್ಲೆಯಿಂದ ಒಬ್ಬ ರಾಜಕಾರಣಿಗೂ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನರ ಮನಸ್ಸಿಗೆ ನೋವುಂಟು ಮಾಡಿದೆ. ಇದು ಜಿಲ್ಲೆಗೆ ಆಗಿರುವ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ಈ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಯಿಂದ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ವೀರಶೈವ ಲಿಂಗಾಯತ ಸಮುದಾಯಕ್ಕೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಶಾಸಕ ಹಂಪನಗೌಡ ಬಾದರ್ಲಿ ಅವರು ಹಿರಿಯ ರಾಜಕಾರಣಿಯಾಗಿದ್ದು, ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕರಾಗಿದ್ದಾರೆ. ಕಾಂಗ್ರೆಸ್ ವರಿಷ್ಠರು, ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ರಾಯಚೂರಿನ ವೀರಶೈವ ಲಿಂಗಾಯತ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಪರಿಗಣಿಸಿ, ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶರಣಭೂಪಾಲ ನಾಡಗೌಡ ಮಾತನಾಡಿ, ಪ್ರತಿಭಟನೆಯಲ್ಲಿ ಎಲ್ಲ ಪಕ್ಷಗಳ ಮುಖಂಡರು ಹಾಗೂ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದಾರೆ. ವೀರಶೈವ ಸಮಾಜವನ್ನು ಏಕೆ ಕಡೆಗಣಿಸಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಹಲವು ವರ್ಷಗಳಿಂದ ಜಿಲ್ಲೆಗೆ ಹಾಗೂ ಸಮಾಜದವರಿಗೆ ಸಚಿವ ಸ್ಥಾನ ದೊರೆತಿಲ್ಲ. ಇದಕ್ಕೆ ಸಮಾಜದ ಒಗ್ಗಟ್ಟಿನ ಕೊರತೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಮಾಜದ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ನಂತರ ನಗರದ ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಟೈರಿಗೆ ಬೆಂಕಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಕಾರ್ಯಕರ್ತ ಅಯ್ಯಪ್ಪ ಶಿಳ್ಳೆ ಮೈಮೇಲೆ ಪೆಟ್ರೋಲ್ ಸುರುವಿಗೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದನು.