ಬರ ಪರಿಸ್ಥಿತಿ, ಅತಿವೃಷ್ಠಿ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂಸಿಂಗ್ ಅವರು ಶುಕ್ರವಾರ ರಾಯಚೂರಿನ ಯಕ್ಲಸ್‌ಪುರ ಸೀಮಾಂತರದ ಜಮೀನಿಗೆ ತೆರಳಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದರು. ಶಾಸಕರಾದ ಬಸನಗೌಡ ದದ್ದಲ್, ಡಾ.ಎಸ್.ಶಿವರಾಜ ಪಾಟೀಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇದ್ದರು.
- ಪರಿಹಾರಕ್ಕಾಗಿ ಸರ್ಕಾರದಿಂದ ಸೂಕ್ತ ನಿರ್ಧಾರ: ಸಚಿವ ಡಾ.ಅಜಯ್ ಧರ್ಮಸಿಂಗ್
ಬರ ಪರಿಸ್ಥಿತಿ, ಅತಿವೃಷ್ಠಿ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂಸಿಂಗ್ ಅವರು ಶುಕ್ರವಾರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದರು.
ನಗರದ ಯಕ್ಲಸ್‌ಪುರ ಸೀಮಾಂತರದ ಜಮೀನುಗಳಿಗೆ ಭೇಟಿ ಹೊಲದಲ್ಲಿನ ಹತ್ತಿ ಹಾಗೂ ತೊಗರಿ ಬೆಳೆಗಳನ್ನು ವೀಕ್ಷಿಸಿ, ನೀರಿನ ಕೊರತೆಯಿಂದ ಬೆಳೆಯ ಬೆಳೆವಣಿಗೆಯಲ್ಲಿ ಕುಠಿತ ಆಗಿರುವ ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆಯಿಲ್ಲದೆ ಹಾಗೂ ನೀರಿನ ಅಭಾವದಿಂದ ನಾವು ಹಾಕಿರುವ ಬೆಳೆ ಒಣಗಿದೆ. ಕಷ್ಟಪಟ್ಟು ಬಿತ್ತನೆ ಮಾಡಿದ ನಮಗೆ ಫಸಲು ಕೈಗೆ ಸಿಕ್ಕಿಲ್ಲ. ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ನಮ್ಮ ನೆರವಿಗೆ ಸ್ಪಂದಿಸಬೇಕೆಂದು ರೈತರು ಸಚಿವರಿಗೆ ಮನವಿ ಮಾಡಿದರು.
ನಂತರ ನಂತರ ಹುಣಸಿಹಾಳಹುಡದ ಜಮೀನಿಗೆ ಭೇಟಿ ನೀಡಿ ಹತ್ತಿ ಬೆಳೆಯನ್ನು ವೀಕ್ಷಣೆ ಮಾಡಿ, ರೈತರ ಸಂಕಷ್ಟಗಳನ್ನು ನೇರವಾಗಿ ಅರಿತುಕೊಂಡು ವರದಿ ಒಪ್ಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಅದರಂತೆ ಪ್ರತಿಯೊಂದು ತಾಲೂಕಿಗೂ ಭೇಟಿ ನೀಡಲಾಗುತ್ತಿದೆಂದು ರೈತರಿಗೆ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲಾಧ್ಯಂತ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಮಳೆ, ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ವರದಿ ಮಾಡಲಾಗುತ್ತದೆ. ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರದ ಕ್ರಮಗಳನ್ನು ವಹಿಸಲಿದೆ. ರೈತರ ಎಲ್ಲ ಸಂಕಷ್ಟ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ರಾಜ್ಯದಲ್ಲಿ ತೀವ್ರಗೊಂಡಿರುವ ರೈತರ ಸಮಸ್ಯೆಗಳು ಮತ್ತು ಬೆಳೆ ಹಾನಿ ಪರಿಶೀಲನೆಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆಯಾ ಭಾಗದ ಶಾಸಕರು ಒಟ್ಟಾಗಿ ಪ್ರತಿ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 2,27,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹತ್ತಿ, ಸೂರ್ಯಕಾಂತಿ ಮತ್ತು ತೊಗರಿ ಸೇರಿದಂತೆ ಶೇ. 90ರಷ್ಟು ಬೆಳೆ ನಷ್ಟವಾಗಿದೆಂದು ಅಂದಾಜಿಸಲಾಗಿದೆ. ರೈತರು ಸಾಲ ಮನ್ನಾ ಮಾಡುವಂತೆ ಹಾಗೂ ತುರ್ತಾಗಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರವು ರೈತರ ಪರವಾಗಿದ್ದು, ಕೇಂದ್ರ ಸರ್ಕಾರವು ರೈತರ ನೆರವಿಗೆ ಬರಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕಳೆದ ಐದು ವರ್ಷಗಳಿಂದ ರೈತರಿಗೆ ಇನ್ಶೂರೆನ್ಸ್ ಕ್ಲೈಮ್ ಸಿಗದ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ರೈತರಿಗೆ ಅನುಕೂಲವಾಗುವಂತೆ ಸರಳೀಕರಣ ಮಾಡಲು ಹಾಗೂ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸಿ ಡಾ.ಹಂಪಣ್ಣ ಸಜ್ಜನ್, ತಹಶಿಲ್ದಾರ್ ಸುರೇಶ ವರ್ಮಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ಉಪ ಜಂಟಿ ನಿರ್ದೇಶಕ ನಹೀಂ ಹುಸೇನ್, ಸಹಾಯಕ ನಿರ್ದೇಶಕಿ ದೀಪಾ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಮುಖಂಡರು ಇದ್ದರು.
ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ಕಂಗಾಲಗಿದ್ದ ರೈತರಿಗೆ ಈಚೇಗೆ ಸುರಿದ ಮಳೆಯಿಂದ ಬೆಳೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಜೀವ ಬಂದಂತಾಗಿದ್ದು, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರು ರೈತರ ಜಮೀನುಗಳಿಗೆ ಸುಮಾರು 20 ಕ್ಕೂ ಅಧಿಕ ಕಾರಿನಲ್ಲಿ ಬಂದ ನೂರಾರು ಕಾರ್ಯಕರ್ತರು ಬೆಳೆ ವಿಕ್ಷೇಣೆ ನೇಪದಲ್ಲಿ ಸಚಿವರ ಜತೆಗೆ ನಿಲ್ಲಲು ನೂರಾರು ಹತ್ತಿ ಗಿಡಗಳನ್ನು ತುಳಿದು ನಾಶ ಮಾಡಿದ್ದು ಕಂಡುಬಂದಿತು. ಇದನ್ನು ಕಂಡ ರೈತರು ಮತ್ತಷ್ಟು ಸಂಕಷ್ಟ ಅನುಭವಿಸಿದರು.