ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್. ಅಧ್ಯಕ್ಷತೆಯಲ್ಲಿ ಇಚೇಗೆ ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ, ಬಾಲಕಾರ್ಮಿಕತೆ ತಡೆ ಕಾಯ್ದೆ, ಪೌಷ್ಟಿಕ ಆಹಾರದ ಕುರಿತು ಸಭೆ ನಡೆಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಡಿಎಚ್‌ಓ ಡಾ.ನಂದಿತಾ ಎಂ.ಎನ್., ಡಿಡಿಪಿಐ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಇದ್ದರು. 
ರಾಯಚೂರು

ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ, ಬಾಲಕಾರ್ಮಿಕತೆ ತಡೆ ಕಾಯ್ದೆ ಕುರಿತು ಸಭೆ

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಅನಿಷ್ಟ ಪದ್ಧತಿ ನಿರ್ಮೂಲನೆ ಶ್ರಮಿಸಿ - ಡಿಸಿ ಪೂವಿತಾ ಎಸ್. ಮನವಿ
ರಾಯಚೂರು ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸಾಕಷ್ಟು ಪ್ರಚಾರಗೊಳಿಸಿ ಜಾಗೃತಿ ಹಾಗೂ ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಇಚೇಗೆ ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ, ಬಾಲಕಾರ್ಮಿಕತೆ ತಡೆ ಕಾಯ್ದೆ, ಪೌಷ್ಟಿಕ ಆಹಾರದ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಂಬಂಧಿಸಿದ ಇಲಾಖೆಗಳು ನಿರಂತರ ಸಭೆ, ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಏರ್ಪಡಿಸುವ ಮೂಲಕ ಸೂಕ್ತ ಕಾನೂನು ಅರಿವು ಮತ್ತು ತಿಳಿವಳಿಕೆ ಮೂಡಿಸಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯವಿವಾಹ ತಡೆಗಟ್ಟುವಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಆಡಳಿತಗಳ ಪಾತ್ರ ಬಹುಮುಖ್ಯವಾಗಿದ್ದು, ಸಮನ್ವಯವಾಗಿ ಕಾರ್ಯನಿರ್ವಹಿಸಿ, ಬಾಲ್ಯವಿವಾಹ ನಡೆಯುವ ಮುನ್ನವೇ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಹಾಗೂ ಸಂಬಅಧಿಸಿದ ಪೋಷಕರು, ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವವರ ವಿರುದ್ಧ ವಿಳಂಬ ಮಾಡದೇ ಪ್ರಕರಣ ದಾಖಲಿಸಬೇಕು ಎಂದರು.
ಬಾಲ್ಯವಿವಾಹಗಳನ್ನು ತಡೆಗಟ್ಟಲು ವಿವಿಧ ಇಲಾಖೆಗಳು ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ಈ ಕುರಿತು ಸೂಕ್ತ ಕ್ರಮವಹಿಸಿ, ಬಾಲ್ಯವಿವಾಹ ನಡೆಯುತ್ತಿರುವ ಕುರಿತು ಕರೆ ಬಂದ ಕೂಡಲೇ ಅಧಿಕಾರಿಗಳು ತಕ್ಷಣ ಅದನ್ನು ತಡೆಯಲು ಸೂಕ್ತ ಕ್ರಮ ವಹಿಸಿ, ಒಂದು ವೇಳೆ ತಮಗೆ ಏನಾದರೂ ಸಮಸ್ಯೆಯಾದಲ್ಲಿ ನನಗೂ ಸಹ ಕರೆ ಮಾಡಿ ತಿಳಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯ ಯಾವ ಭಾಗದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅಂತಹ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡಿ ಜನರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ತಿಳುವಳಿಕೆ ನೀಡಬೇಕು. ಯಾವದೇ ಶಾಲೆ, ಕಾಲೇಜು ವಿದ್ಯಾರ್ಥಿಗಳು ಎರಡು ದಿನರಜೆ ಪಡೆದರು ಸಹ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತರು,ಪಂಚಾಯತ್ ಇಲಾಖಾ ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಎಚ್ಚರಿಕೆಯ ನಿಗಾ ಇಡಬೇಕು. ಯಾವದೇ ಮಗು ಈ ಸಮಾಜ ವಿರೋಧಿ ಪದ್ಧತಿಗೆ ಒಳಗಾಗದಿರಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಡಿಎಚ್‌ಓ ಡಾ.ನಂದಿತಾ ಎಂ.ಎನ್., ಡಿಡಿಪಿಐ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಸೇರಿದಂತೆ ಅನೇಕರು ಇದ್ದರು.