ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಎಸ್‌ಐಆರ್ ಜಾಗೃತಿ ಮೂಡಿಸುವ ಮ್ಯಾರಥಾನ್ ಓಟ ಹಾಗೂ ಸೈಕ್ಲೋಥಾನ್ ಜಾಥಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್.ಚಾಲನೆ ನೀಡಿದರು. ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆ ಉಪ ಆಯುಕ್ತ ಶರಣಪ್ಪ, ಜಿಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಯೋಜನಾ ನಿರ್ದೇಶಕ ಡಾ.ಟಿ.ರೋಣಿ, ಮಹಾನಗರ ಪಾಲಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣ, ಡಿಡಿಪಿಐ ಮಲ್ಲಿಕಾರ್ಜುನ, ತಹಸೀಲ್ದಾರ್ ಸುರೇಶ್ ವರ್ಮ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಇದ್ದರು.
- 650ಕ್ಕೂ ಅಧಿಕ ಜನರಿಂದ ನೋಂದಣಿ
- ಎಸ್‌ಐಆರ್ ಕಾರ್ಯ ಯಶಸ್ವಿಗೆ ಸಹಕರಿಸಿ: ಜಿಲ್ಲಾಧಿಕಾರಿ ಪೂವಿತಾ ಎಸ್.
ರಾಯಚೂರು ಜಿಲ್ಲೆಯಲ್ಲಿ ಎಸ್‌ಐಆರ್‌ಗೆ ವೇಗ ನೀಡಲು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಯ ಸಂಯೋಗದಲ್ಲಿ ಜಾಗೃತಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ಮತದಾರರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೆ ಸಹಕಾರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ2026ರ ಹಾಗೂ ನಗರ ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯ ಹೊಸ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಮ್ಯಾರಥಾನ್ ಓಟ ಹಾಗೂ ಸೈಕ್ಲೋಥಾನ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆವು ಪ್ರಾರಂಭವಾಗಿ 8 ರಿಂದ 10 ದಿನಗಳಾಗಿದ್ದು, ಶೇ.90ಕ್ಕಿಂತ ಹೆಚ್ಚು ಗಣತಿ ನಮೂನೆಗಳನ್ನು ಮತದಾರರಿಗೆ ನೀಡಲಾಗಿದೆ. ಮತ್ತೆ ಅದನ್ನು ಮರಳಿ ಪಡೆಯಲು ಹಾಗೂ ಆನ್‌ಲೈನ್ ನೋಂದಣಿ ಮಾಡುವ ಕೆಲಸವಾಗುತ್ತಿದ್ದು, ಸಾರ್ವಜನಿಕರು ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ಸಮಯದಲ್ಲಿ ಸಂಬಅಧಿಸಿದ ಬಿಎಲ್‌ಒ ಅಧಿಕಾರಿಗಳಿಗೆ ನೀಡಬೇಕು. ಬಿಎಲ್‌ಒಗಳು ತಮ್ಮ ಮನೆಗೆ ಬಂದಾಗ ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ ಮಾತನಾಡಿ, ಜಿಲ್ಲೆಯಲ್ಲಿ ಎಸ್‌ಐಆರ್ ಕುರಿತು ಬಿಎಲ್‌ಒಗಳು ಮತದಾರರ ಮನೆಗೆ ಬಂದಾಗ ಅಗತ್ಯ ದಾಖಲಾತಿಗಳನ್ನು ನೀಡಿ, ಅವರಿಗೆ ಸಹಕಾರಿಸಬೇಕು. ಜಿಲ್ಲೆಯಲ್ಲಿ ಉತ್ತಮವಾದ ವಾತಾರಣವಿದೆ. ಮುಂದೆಯೂ ಇದೇ ರೀತಿಯಲ್ಲಿ ಸಾರ್ವಜನಿಕರು ಸಹಕಾರಿಸಬೇಕೆಂದರು.
ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಮಾತನಾಡಿ, ಭಾತರ ಚುನಾವಣಾ ಆಯೋಗದ ನಿರ್ದೇಶದನದಂತೆ ಮತದಾರರ ಸಮಗ್ರ ಪರಿಷ್ಕರಣೆ ಕಾರ್ಯವು ಪ್ರಗತಿಯಲ್ಲಿದ್ದು, ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶೇ.87ರಷ್ಟು ಪ್ರಗತಿ ಸಾಧಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷದ ಬೂತ್ ಏಜೆಂಟರಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದರು.
ನಂತರ ಜಿಲ್ಲಾ ಕ್ರೀಡಾಂಗಣದಿಂದ ಓಟ ಆರಂಭಿಸಿದ ಸ್ಪರ್ಧಾಳುಗಳು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ತೀನ್ ಕಂದಿಲ್, ಮಹಾವೀರ ವೃತ್ತ, ಚಂದ್ರಮೌಳೇಶ್ವರ ವೃತ್ತ ಹಾಗೂ ಬಸವೇಶ್ವರ ವೃತ್ತ ಮಾರ್ಗವಾಗಿ ಮರಳಿ ಕ್ರೀಡಾಂಗಣಕ್ಕೆ ಬಂದು ಸೇರಿದರು. ಈ ಓಟದಲ್ಲಿ ಪುರುಷರ ವಿಭಾಗದಲ್ಲಿ ತಾಯಪ್ಪ ನಾಯಕ ಪ್ರಥಮ ಬಹುಮಾನ, ನರಸಿಂಹಲು ದ್ವಿತೀಯ ಬಹುಮಾನ ಮತ್ತು ನರಸಿಂಹಲು ವಡವಟ್ಟಿ ತೃತೀಯ ಬಹುಮಾನ ಗಿಟ್ಟಿಸಿ ಗೆಲುವಿನ ನಗೆ ಬೀರಿದರು.
ಮಹಿಳಾ ವಿಭಾಗದಲ್ಲಿ ಮಹೇಶ್ವರಿ ಪ್ರಥಮ, ನಂದಿತಾ ದ್ವಿತೀಯ ಹಾಗೂ ಪದ್ಮವತಿ ಅವರು ತೃತೀಯ ಬಹುಮಾನ ಪಡೆದುಕೊಂಡು ಸಂತಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆ ಉಪ ಆಯುಕ್ತ ಶರಣಪ್ಪ, ಜಿಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಯೋಜನಾ ನಿರ್ದೇಶಕ ಡಾ.ಟಿ.ರೋಣಿ, ಮಹಾನಗರ ಪಾಲಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣ, ಡಿಡಿಪಿಐ ಮಲ್ಲಿಕಾರ್ಜುನ, ತಹಸೀಲ್ದಾರ್ ಸುರೇಶ್ ವರ್ಮ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಸೇರಿ ಅನೇಕರು ಇದ್ದರು.