ಸಿರವಾರ ಪಟ್ಟಣ ಪಂಚಾಯಿತಿ ಕಚೇರಿ ಹೊರನೋಟ.
ಸಿರವಾರ: ವೈ.ಭೂಪನಗೌಡ ರಾಜೀನಾಮೆಯಿಂದ ತೆರವಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜ.20ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪೈಪೋಟಿ ಏರ್ಪಟ್ಟಿದೆ. ಆದರೆ, ಅಧ್ಯಕ್ಷರ ಆಯ್ಕೆ ಪಕ್ಷೇತರರ ಕೈಯಲ್ಲಿರುವುದು ವಿಶೇಷ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮೊದಲ ಅವಧಿಗೆ ಕಾಂಗ್ರೆಸ್‌ನ ವೈ.ಭೂಪನಗೌಡ ಹಾಗೂ ಬಿಜೆಪಿಯಿಂದ ಹನುಮಂತಿ ಮಲ್ಲಪ್ಪ ಸ್ಪರ್ಧಿಸಿದ್ದರು. ಇಬ್ಬರೂ ಸಮಬಲ ಸಾಧಿಸಿದ್ದರಿಂದ ಲಾಟರಿ ಎತ್ತಿದಾಗ ವೈ.ಭೂಪನಗೌಡಗೆ ಅಧಿಕಾರ ಒಲಿಯಿತು. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮೊದಲ 15 ತಿಂಗಳ ಅಧಿಕಾರದ ನಂತರ ಭೂಪನಗೌಡ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ 15 ತಿಂಗಳು ಅಧ್ಯಕ್ಷರಾಗಲು ಕಾಂಗ್ರೆಸ್ ಮತ್ತು ಬಿಜೆಪಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಒಟ್ಟು 20 ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್ 9, ಬಿಜೆಪಿ 6, ಜೆಡಿಎಸ್ 3 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಆಕಾಂಕ್ಷಿಗಳ ದಂಡು: ಕಾಂಗ್ರೆಸ್‌ನಿಂದ ಹಸೇನ ಅಲಿಸಾಬ್, ಸೂರಿ ದುರುಗಣ್ಣ ನಾಯಕ, ಮೌಲಾಸಾಬ್ ವರ್ಚಸ್, ಹಾಜಿ ಚೌದ್ರಿ ಹಾಗೂ 12ನೇ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ ಜ್ಯೋತಿ ದಾನನಗೌಡ ಸಹ ರೇಸ್‌ನಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ಕೃಷ್ಣ ನಾಯಕ ಮತ್ತು ಸಂದೀಪ ಪಾಟೀಲ್ ಆಕಾಂಕ್ಷಿಗಳಾಗಿದ್ದು, ಪಕ್ಷೇತರ ಬೆಂಬಲದೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿಯಬೇಕು.
ಪಟ್ಟಣ ಪಂಚಾಯಿತಿ ಒಟ್ಟು 20 ಸದಸ್ಯರಲ್ಲಿ ಕಾಂಗ್ರೆಸ್ ಒಂಬತ್ತು ಸೇರಿ ಶಾಸಕ, ಎಂಪಿ ಮತ ಸೇರಿ 11 ಸದಸ್ಯ ಬಲವಿದ್ದರೆ, ಬಿಜೆಪಿ 6 ಹಾಗೂ ಜೆಡಿಎಸ್ 3 ಮೈತ್ರಿಯಿಂದ ಒಟ್ಟು ಸಂಖ್ಯೆ ಒಂಭತ್ತಕ್ಕೇರಲಿದೆ. ಆದರೆ, ಎರಡೂ ಪಕ್ಷಗಳಿಗೆ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದ್ದು, ಯಾರತ್ತ ಒಲವು ತೋರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.