ಲಿಂಗಸುಗೂರು ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಮಾವಿನ ಹಣ್ಣು ಖರೀದಿಸುತ್ತಿರುವ ಜನರು.
- ಅಕಾಲಿಕ ಮಳೆಗೆ ಇಳುವರಿ ಕುಂಠಿತ
- ಕೆಜಿಗೆ 180 ರೂ. ವರೆಗೆ ಬೆಲೆ
ಲಿಂಗಸುಗೂರು: ಹಣ್ಣುಗಳ ರಾಜ ಮಾವು ಈ ಸಲ ತಡವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಕಾಲಿಕ ಮಳೆಯಿಂದ ನಿರೀಕ್ಷಿತ ಇಳುವರಿ ಬಾರದ ಕಾರಣ ಮಾವಿನ ಹಣ್ಣಿನ ಬೆಲೆ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟಿದೆ.
ಕಳೆದ ವರ್ಷ ಪ್ರತಿ ಕೆಜಿ ಮಾವಿಗೆ 50 ರೂ.ಯಿಂದ 80 ರೂ. ದರವಿತ್ತು. ಆರಂಭದಿಂದ ಕೊನೆ ಹಂತದವರೆಗೂ ದರದಲ್ಲಿ ಏರುಪೇರಾಗಿರಲಿಲ್ಲ. ಆದರೆ, ಈ ವರ್ಷ ಆರಂಭದಲ್ಲೇ 120 ರಿಂದ 180 ರೂ.ರವರೆಗೆ ದರವಿದೆ. ಪಟ್ಟಣದ ಬಸ್ ನಿಲ್ದಾಣ ಸರ್ಕಲ್, ಗಡಿಯಾರ ಚೌಕ, ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧೆಡೆ ಮಾವು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ದರ ಹೆಚ್ಚಿದ್ದರೂ ಮಾವು ಸವಿಯಲು ಮುಂದಾಗುತ್ತಿದ್ದಾರೆ.
ತಾಲೂಕಿನಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ವ್ಯಾಪಾರಿಗಳು ಸ್ಥಳೀಯ ಮಾವು ಸೇರಿದಂತೆ ಶ್ರೀನಿವಾಸಪುರ, ಆಂಧ್ರ ಭಾಗದಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ರಸಪೂರಿ, ಆಪೋಸ್, ಬೆನೀಷ್, ಜವಾರಿ, ಸಿಂಡೊಲಾ, ಕೇಸರ್ ಸೇರಿದಂತೆ ವಿವಿಧ ತಳಿಗಳ ಮಾವುಗಳನ್ನು ಮಾರಾಟಕ್ಕಿಡಲಾಗಿದೆ. ಮುಂದಿನ ವಾರದಲ್ಲಿ ಮಲ್ಲಿಕಾ, ನೀಲಂ, ಮಲಗೋಬಾ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲಿವೆ ಎನ್ನಲಾಗಿದೆ.
ಇಳುವರಿ ಕಡಿಮೆ: ಈ ವರ್ಷ ಆರಂಭದಲ್ಲಿ ಮಾವಿನ ಮರಗಳು ಸಾಕಷ್ಟು ಹೂಗಳಿಂದ ಕಂಗೊಳಿಸುತ್ತಿದ್ದವು. ಆದರೆ, ಚಳಿಗಾಲದಲ್ಲಿ ಇಬ್ಬನಿ, ಅಕಾಲಿಕ ಆಲಿಕಲ್ಲು ಮಳೆಯಿಂದ ಕಾಯಿ ಬಿಡುವ ಹಂತದಲ್ಲೇ ಉದುರಿ ಬಿದ್ದವು. ಹವಾಮಾನ ವ್ಯೆಪರೀತ್ಯದಿಂದ ಮಾವು ಇಳುವರಿ ಕುಂಠಿತವಾಗಿದ್ದು, ವಿಳಂಬವಾಗಿ ಮಾರುಕಟ್ಟೆಗೆ ಬಂದಿದೆ. ಪ್ರತಿವರ್ಷ ಏಪ್ರಿಲ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದವು.