ಮಧ್ವನವಮಿ ನಿಮಿತ್ತ ದೇವದುರ್ಗ ತಾಲೂಕು ವಂದಲಿ ಬಲಭೀಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ರಾಯಚೂರು

ಶ್ರೀ ಬಲಭೀಮ ದೇವರ ಶೋಭಾಯಾತ್ರೆ

ದೇವದುರ್ಗ: ಮಧ್ವನವಮಿ ನಿಮಿತ್ತ ತಾಲೂಕಿನ ಐತಿಹಾಸಿಕ ವಂದಲಿ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದಲ್ಲಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. 
ಬಲಭೀಮ ದೇವರಿಗೆ ಮುಂಜಾನೆ 4 ಗಂಟೆಗೆ ಮಧು ಹಾಗೂ ಪಂಚಾಮೃತ ಅಭಿಷೇಕ, ಎಲೆಪೂಜೆ, ಬೆಳ್ಳಿಕವಚ ಅಲಂಕಾರ ನಡೆಯಿತು. 10ಗಂಟೆಗೆ ಕಣ್ವಮಠದ ಪೀಠಾಧಿಪತಿ 1008 ವಿದ್ಯಾಕಣ್ವವಿರಾಜ ತೀರ್ಥರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. 
ಇದಕ್ಕೂ ಮುನ್ನ ದೇವರನ್ನು ಸಂಜೀವಮೂರ್ತಿ ದೇವಸ್ಥಾನದಿಂದ ಶೋಭಾಯಾತ್ರೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಹನುಮ, ಭೀಮ, ಮಧ್ವಾಂತರ್ಗತ ವಿಠ್ಠಲಕೃಷ್ಣನ ಸಂಸ್ಥಾನ ಪೂಜೆ, ಮುದ್ರಾಧಾರಣೆ ಜರುಗಿತು. ಭಜನಾ ಮಂಡಳಿಯೊಂದಿಗೆ ರಥೋತ್ಸವ, ಸತ್ಯನಾರಾಯಣ ಪೂಜೆ ನೆರವೇರಿತು. 
ಮಧ್ಯಾಹ್ನ 2ಗಂಟೆಯಿಂದ ಮಹಾನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ಅದ್ದೂರಿಯಾಗಿ ನಡೆಯಿತು. ಮಾಧವಾಚಾರ್ಯ ಜೋಷಿ ಶಿರಗುಂಪಿ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.