ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ರಾಜ್ಯ ಕಾರ್ಯದರ್ಶಿ ಶ್ರೀನಾಥ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ದೂರುಗಳ ಪರಿಶೀಲನೆ ಸಭೆ ನಡೆಯಿತು. ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶ ಅನುಗೌಡ ಪಾಟೀಲ್, ಲೋಕಾಯುಕ್ತ ಎಸ್ಪಿ ಸತೀಶ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸ್ಪಿ ಅರುಣಾಂಗ್ಶಿ ಗಿರಿ, ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ , ಎಡಿಸಿ ಶಿವಾನಂದ ಭಜಂತ್ರಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರರಾಜ್‌ಸಿಂಗ್ ಇದ್ದರು.
- ತಪ್ಪು ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಕ್ರಮವಾಗಲಿದೆ
- ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ
- ಲೋಕಾಯುಕ್ತ ರಾಜ್ಯ ಕಾರ್ಯದರ್ಶಿ ಶ್ರೀನಾಥ ಎಚ್ಚರಿಕೆ
ರಾಯಚೂರು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡುವಾಗ ಅಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಿದ್ದು ಕಂಡುಬಂದರೆ ಅಂತವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಂದು ಲೋಕಾಯುಕ್ತ ರಾಜ್ಯ ಕಾರ್ಯದರ್ಶಿ ಶ್ರೀನಾಥ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಜಿಲ್ಲೆಯ ವಿವಿಧ ಇಲಾಖೆಗಳ ದೂರುಗಳ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಐದು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅನೇಕ ಲೋಪಗಳು ಇಲಾಖೆಯಲ್ಲಿ ಕಂಡುಬಂದಿವೆ.
ಮಹಾನಗರ ಪಾಲಿಕೆಯಲ್ಲಿ ಶೌಚಾಲಯಗಳ ಬಳಕೆಯಾಗುತ್ತಿಲ್ಲ. ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಕಚೇರಿಯಲ್ಲಿ ಇಲಾಖಾವಾರು ಕಡತಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ನಗರದಲ್ಲಿರುವ ಅನಧಿಕೃತ ಕಟ್ಟಡಗಳ ಕಡತವೇ ಇಲ್ಲ. ಸಾರ್ವಜನಿಕರು ನೀಡುವ ದೂರುಗಳ ಕಳೆದ ಆರು ತಿಂಗಳಿನಿಂದ ವಿಲೇವಾರಿಯಾಗದೇ ಬಾಕಿ ಉಳಿದಿವೆ. ಕರವಸೂಲಿಗಾರರು ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಡ್ಡಕೊಟ್ಟರೆ ಕೆಲಸ ಮಾಡಿಕೊಡುವ ದೂರುಗಳಿವೆ. ಕಸವಿಲೇವಾರಿ ವಾಹನಗಳ ದಾಖಲೆಗಳೇ ಇಲ್ಲ. ಇಂಧನ ವೆಚ್ಚ, ನಿರ್ವಹಣೆ ಕುರಿತು ಅಸಮರ್ಪಕ ಮಾಹಿತಿ ನೀಡಲಾಗಿದೆ. ಎ ಮತ್ತು ಬಿ ಖಾತಗೆ 760 ಅರ್ಜಿಗಳು ಬಾಕಿಯಿವೆ. ಇ-ಖಾತೆಗೆ ಅರ್ಜಿಗಳ ಮಾಹಿತಿಯೇ ಇಲ್ಲ. ರಾಜಕಾಲುವೆ, ಒತ್ತುವರಿ ಕುರಿತು ಮಾಹಿತಿ ಇಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿದೆಂದು ಎಚ್ಚರಿಸಿದರು.
ಜಿಲ್ಲೆಯ ಸಿಂಧನೂರು ನಗರಸಭೆ, ದೇವದುರ್ಗ, ಲಿಂಗಸುಗೂರು ಪುರಸಭೆಗಳಲ್ಲಿಯೂ ಅವ್ಯವಸ್ಥೆಯಿದೆ. ದೇವದುರ್ಗದಲ್ಲಿ ಹೊರಗುತ್ತಿಗೆ ಕೆಆರ್‌ಐಡಿಎಲ್ ನೌಕರನ ಬಳಿ 10 ಸಾವಿರ ರೂ ಹಣ, ಕಾರು ಇರುವದು ಪತ್ತೆಯಾಗಿದೆ. ಸಿಂಧನೂರು ಯೋಜನಾ ಪ್ರಾಧಿಕಾರದಲ್ಲಿ 27 ಬಡಾವಣೆಗಳಿದ್ದು, ಅಕ್ರಮ ಬಡಾವಣೆಗಳ ಮಾಹಿತಿಯೇ ಇಲ್ಲ. ಅಬಕಾರಿ ಇಲಾಖೆಯಲ್ಲಿ ಉಪ ಆಯುಕ್ತ ಸಹಿ ನಕಲುಮಾಡಿ ಪ್ರಕರಣ ಪತ್ತೆಯಾಗಿದೆಂದು ಬೇಸರ ವ್ಯಕ್ತಪಡಿಸಿದರು.
ಗಣಿ ಇಲಾಖೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯಾದ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ 14 ಚೆಕ್ ಪೋಸ್ಟಗಳಿದ್ದು ಅಕ್ರಮ ಮರಳು ಸಾಗಾಣೆ ನಡೆಯುತ್ತಿದ್ದು ಪ್ರಕರಣಗಳ ಸಂಖ್ಯೆ ಹೆಚ್ಚಿಸಬೇಕು. ಕೈಗೊಂಡಿರುವ ಕ್ರಮಗಳ ಕುರಿತ ವರದಿ ನೀಡುವಂತೆ ಸೂಚಿಸಿದರು. ಕೃಷಿ ಇಲಾಖೆಯಲ್ಲಿ ಎನ್‌ಎಂಎಫ್‌ಡಿ ಯೋಜನೆಯ ಅನುದಾನ ಬಳಕೆ ಮಾಡಿಕೊಂಡಿಲ್ಲಲ. ಬೀಜ, ಗೊಬರ ದಾಸ್ತಾನು, ವಿಲೇವಾರಿ ರಜಿಸ್ಟರ್ ದಾಖಲೆಯೇ ಇಲ್ಲ. ಅವಧಿ ಮುಗಿದ ಬೀಜ, ಗೊಬ್ಬರ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇರುವದು ಪತ್ತೆಯಾಗಿದೆ. ಸಿಂಧನೂರು ತಾಲೂಕಿನಲ್ಲಿ 41 ಸಾವಿರ ಲೀಟರ್ ಕ್ರಿಮಿನಾಶಕ ವಿತರಣೆ ಮಾಡಿಲ್ಲ ಎಂದರು.
ಭೂ ದಾಖಲೆ ಇಲಾಖೆಯಲ್ಲಿ ಸರ್ವೆ ಅರ್ಜಿಗಳು ವಿಲೇವಾರಿ ಮಾಡಬೇಕು. 196 ಅರ್ಜಿಗಳು ಬಾಕಿ ಉಳಿದಿವೆ. ಕೆರೆಗಳ ಕುರಿತು ಸಮೀಕ್ಷಾ ವರದಿಯನ್ನು ನಕ್ಷೆಯೊಂದಿಗೆ ಸಲ್ಲಿಸಲು ಸೂಚಿಸಿದರು. ದೇವದುರ್ಗ ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ್ಯರೇ ಇಲ್ಲ. ಹೋಮಿಯೋಪತಿ ವೈದ್ಯ ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಡಾ.ಗಿರಿಜಾ ಎಂಬುವವರು 2022ರಿಂದ ಅನಧಿಕೃತ ಗೈರು ಹಾಜರಿಯಾಗಿದ್ದರೂ ಯಾವುದೇ ಕ್ರಮ ಇಲಾಖೆ ಕೈಗೊಂಡಿಲ್ಲ. 3 ವರ್ಷ ವಾದರೂ ಕ್ರಮವಾಗಿಲ್ಲ ಕೂಡಲೇ ಮಾಹಿತಿ ನೀಡದಿದ್ದರೆ ಕ್ರಮವಾಗಲಿದೆಂದು ಡಿಎಚ್‌ಓ ಡಾ.ಸುರೇಂದ್ರ ಬಾಬುಗೆ ಎಚ್ಚರಿಸಿದದರು.
ವಸತಿ ನಿಲಯಗಳಲ್ಲಿ ದಾಸ್ತಾನುವಹಿ ನಿರ್ವಹಿಸಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಇಲ್ಲ. ಲಿಂಗಸೂಗೂರು ವಸತಿನಿಲಯದಲ್ಲಿ ಕರೆಂಟ್ ಇಲ್ಲ. ಶುಚಿ ಪ್ಯಾಡ್ ನೀಡಿಲ್ಲ. ಆರೋಗ್ಯ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶ ಅನುಗೌಡ ಪಾಟೀಲ್, ಲೋಕಾಯುಕ್ತ ಎಸ್ಪಿ ಸತೀಶ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸ್ಪಿ ಅರುಣಾಂಗ್ಶಿ ಗಿರಿ, ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ , ಎಡಿಸಿ ಶಿವಾನಂದ ಭಜಂತ್ರಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರರಾಜ್‌ಸಿಂಗ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.